ವಡಗೇರಾದಲ್ಲಿ ಸಭೆ ನಡೆಸಿದ ಹೆಚ್. ಎಂ ರೇವಣ್ಣ | ಗ್ಯಾರಂಟಿ ಯೋಜನೆ ಶೇ.98 ಯಶಸ್ವಿ
ಯಾದಗಿರಿ: ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳು ತುಂಬಾ ಸಹಕಾರಿಯಾಗಿವೆ. ಕೊಟ್ಟ ಮಾತಿನಂತೆ ನಮ್ಮ ಸರಕಾರ ನುಡಿದಂತೆ ನಡೆದಿದೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್. ಎಂ ರೇವಣ್ಣ ಹೇಳಿದರು.
ವಡಗೇರಾ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಡಗೇರಾ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಗ್ಯಾರಂಟಿ ಯೋಜನೆ ಪ್ರತಿಶತ ಶೇ.98% ಯಶಸ್ಸು ಸಾಧಿಸಿದೆ. ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ನಮ್ಮ ಸರಕಾರವು ಮಹಿಳೆಯರಿಗೆ ಶಕ್ತಿ ಯೋಜನೆ ಹಾಗೂ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಅಡಿ ಎರಡು ಸಾವಿರ ರೂಪಾಯಿಗಳು ಮತ್ತು ಯುವಕರಿಗೆ ಯುವನಿಧಿ, ಬಡವರಿಗೆ ಎರಡುನೂರು ಯೂನಿಟ್ ಉಚಿತ ವಿದ್ಯುತ್, ಬಿಪಿಎಲ್ ಕುಟುಂಬದವರಿಗೆ ಅಕ್ಕಿಯ ಜೊತೆಗೆ ನಗದು ಹಣ ನೀಡುವ ಮೂಲಕ ನಮ್ಮ ಐದು ಗ್ಯಾರಂಟಿಗಳು ಬಡವರ ಬದುಕಿಗೆ ಬೆಳಕಾಗಿವೆ ಎಂದರು.
ಗ್ಯಾರಂಟಿಗಳು ನಿಲ್ಲಿಸುತ್ತಾರೆ ಎಂದು ಬರಿ ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮ ಸರಕಾರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿಗಳು ನಿಲ್ಲಿಸುವುದಿಲ್ಲ. ಸರಕಾರ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಪಂಚ ಗ್ಯಾರಂಟಿ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ಪಂಚ ಗ್ಯಾರಂಟಿಯ ಅಧ್ಯಕ್ಷರು ಸದಸ್ಯರು ಫಲಾನುಭವಿಗಳ ಮನೆ ಮನೆಗೆ ಭೇಟಿ ನೀಡಿ ಸಮರ್ಪಕವಾಗಿ ಪಂಚ ಗ್ಯಾರಂಟಿ ಸೌಲಭ್ಯ ತಲುಪಿಸುವಲ್ಲಿ ಶ್ರಮವಹಿಸಬೇಕು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿ ಮಹಿಳೆಯರಿಗೂ ಆದ್ಯತೆ ನೀಡುವಂತೆ ಶಾಸಕರಿಗೆ ಹೇಳಿದರು.
ಅಧಿಕಾರಿಗಳು ಪಂಚ ಗ್ಯಾರಂಟಿ ಯೋಜನೆ ಕುರಿತು ನಿರ್ಲಕ್ಷ್ಯ ಮಾಡದೆ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಸಾರ್ವಜನಿಕರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರು, ಗ್ಯಾರೆಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಶ್ರೇಣಿ ಕುಮಾರ್ ಧೋಕಾ, ತಾಲೂಕು ಅಧ್ಯಕ್ಷ ಖಾಜಾಮೈನುದ್ದೀನ್ ಮಿರ್ಚಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಸಹಾಯಕ ಆಯುಕ್ತರಾದ ಡಾ. ಹಂಪಣ್ಣ , ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್,ಇಓ ಮಲ್ಲಿಕಾರ್ಜುನ ಸಂಗ್ವಾರ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.