ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ | ಒಂದು ಲಕ್ಷಕ್ಕೂ ಅಧಿಕ ಫಲಾನುಭವಿ ಗಳಿಗೆ ಹಕ್ಕುಪತ್ರ ವಿತರಣೆ | ಪೌರಾಡಳಿತ,ಹಜ್ ಖಾತೆ ಸಚಿವ ರಹೀಂ ಖಾನ್ ಹೇಳಿಕೆ

ಯಾದಗಿರಿ: ಮೇ 20 ರಂದು ಹೊಸಪೇಟೆಯಲ್ಲಿ ಏರ್ಪಡಿಸಲಾಗುವ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯ ಉದ್ದೇಶ ಹೊಂದಲಾಗಿದೆ ಎಂದು ಪೌರಾಡಳಿತ, ಹಜ್ ಖಾತೆ ಸಚಿವರಾದ ರಹೀಂ ಖಾನ್ ಅವರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹೊಸಪೇಟೆಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಸರ್ಕಾರದ ಸಾಧನಾ ಸಮಾವೇಶದ ಸಿದ್ಧತೆ ಮತ್ತು ಫಲಾನುಭವಿಗಳಿಗೆ ಕಳುಹಿಸುವ ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಸಮಾವೇಶಕ್ಕೆ ಫಲಾನುಭ ವಿಗಳ ಮೇಲುಸ್ತುವಾರಿ ನೋಡಿಕೊಳ್ಳಲು ಸರ್ಕಾರ ತಾಲೂಕುವಾರು ಸಚಿವರನ್ನು ನಿಯೋಜಿಸಿದ್ದರು, ಅದರ ನ್ವಯ ಯಾದಗಿರಿ ಹಾಗೂ ಗುರುಮಠಕಲ್ ಗೆ ತಾವು ಭೇಟಿ ನೀಡಿದ್ದು, ಜಿಲ್ಲೆಯ 21 ಗ್ರಾಮಗಳ ಸುಮಾರು 4653 ಫಲಾನುಭವಿಗಳ ಪೈಕಿ 1500 ಫಲಾನುಭವಿಗಳನ್ನು ತಾತ್ಕಾಲಿಕವಾಗಿ ಹಕ್ಕುಪತ್ರ ವಿತರಿಸುವ ಉದ್ದೇಶ ಹೊಂದಲಾಗಿದೆ. ನಂತರ ಉಳಿದ ಹಕ್ಕುಪತ್ರಗಳನ್ನು ಆಯಾ ಶಾಸಕರಿಂದ ವಿತರಣೆ ಯಾಗಲಿದೆ ಎಂದು ಹೇಳಿದರು.

ಹಟ್ಟಿ, ಹಾಡಿ, ತಾಂಡಾ, ಕ್ಯಾಂಪ್, ಕಾಲನಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ವಿವಿಧ ಜಿಲ್ಲೆಗಳ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಈ ಸಮಾವೇಶ ದಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಮೂಲಕ ಕಳೆದ 2 ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ 1.20 ಲ.ಕೋ.ರೂಗಳನ್ನು ಫಲಾನುಭವಿಗಳಿಗೆ ಜಮೆ ಮಾಡಿದೆ ಹಾಗೂ ಒದಗಿಸಿದೆ. ರಾಜ್ಯ ಸರ್ಕಾರ ಜನತೆಗೆ ನೀಡಿದ ಭರವಸೆಯನ್ನು ನೂರಕ್ಕೆ ನೂರರಷ್ಟು ಈಡೇರಿಸಿದೆ. ಅದರಂತೆ ಅಭಿವೃದ್ಧಿಗೂ ಸರ್ಕಾರ ವಿಶೇಷ ಗಮನ ನೀಡಿದ್ದು, ಪ್ರಸಕ್ತ ವರ್ಷ 3 ಲ.ಕೋ ರೂ ಗಳನ್ನು ಆಯವ್ಯಯದಲ್ಲಿ ಕಾಯ್ದಿರಿಸಿದೆ.

ಇತ್ತೀಚೆಗೆ ಬೀದರದಲ್ಲಿ 2000 ಕೋ.ರೂಗಳಿಗೂ ಅಧಿಕ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಿದೆ.ಕಲಬುರ್ಗಿ ಯಲ್ಲಿಯೂ ಸಾವಿರಾರು ಕೋ.ರೂ ಗಳ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದೆ. ನಮ್ಮ ಸರ್ಕಾರ ಪ್ರತಿ ಜಿಲ್ಲೆಗೆ ಕನಿಷ್ಠ 500 ಕೋ.ರೂ ಗಳನ್ನು ಒದಗಿಸಿ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ ಎಂದು ಹೇಳಿದರು.

ಬಿ -ಖಾತಾ ವಿತರಣೆಗೆ ಹೊಸ ಆದೇಶ ಶೀಘ್ರ: ರಾಜ್ಯದ ಮಹಾನಗರ ಪಾಲಿಕೆ ಹಾಗೂ ನಗರಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ಮತ್ತು ಮನೆ ನಿವೇಶನ ಹೊಂದಿದವರಿಗೆ ಸರ್ಕಾರವು ಬಿ ಖಾತಾ ವಿತರಣೆಗೆ ಸಂಬಂಧಿಸಿದಂತೆ ಈಗಾಗಲೇ ಮುಂದಿನ ಮೂರು ತಿಂಗಳ ಕಾಲಾವಕಾಶ ನೀಡಿ ಆದೇಶಿಸಿದೆ ಎಂದು ತಿಳಿಸಿದ ಸಚಿವ ರಹೀಂ ಖಾನ್ ಅವರು ಮುಂಬರುವ 15 ದಿನಗಳಲ್ಲಿ ಈ ಕುರಿತು ಹೊಸ ಆದೇಶ ಹೊರಬೀಳಲಿದೆ ಎಂದು ಹೇಳಿದರು.

ಈಗಾಗಲೇ ಇರುವ ನಿಯಮಾವಳಿಯಂತೆ ರಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾದ ಆಸ್ತಿಗಳಿಗೆ ಮಾತ್ರ ಬಿ-ಖಾತಾ ನೀಡಲಾಗುತ್ತಿದೆ.ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಪಾವತಿ ಆಧಾರ, ನೋಟರಿ ಸೇರಿದಂತೆ ಇನ್ನಿತರ ಆಧಾರದ ಮೇಲೆ ಒಂದೇ ಅವಧಿಯಲ್ಲಿ ಸಮಸ್ಯೆ ಪರಿಹರಿಸಲು ನೂತನ ಸರ್ಕಾರಿ ಆದೇಶವನ್ನು ಮುಂಬರುವ 15 ದಿನಗಳಲ್ಲಿ ಹೊರಡಿಸಲಾಗುವುದು ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ಜಿಲ್ಲಾಧಿಕಾರಿ ಡಾ.ಸುಶೀಲ .ಬಿ,ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!