ರೈತರಿಗೆ ಅನ್ಯಾಯವಾದರೆ ಸಹಿಸಲ್ಲ, ಸರ್ಕಾರ ತನಿಖೆ ಮಾಡಿ ಸತ್ಯ ಬಯಲಿಗೆ ತರಲು ಶಾಸಕ ಕಂದಕೂರ ಒತ್ತಾಯ 

ರೈತರಿಗೆ ಮಂಜೂರಾದ ಭೂಮಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿಲ್ಲ : ವಕ್ಫ್‌ ಮಂಡಳಿಗೆ ದಾನಿಗಳು ನೀಡಿದ 14,201 ಎಕರೆ ವಕ್ಫ್‌ ಆಸ್ತಿಯಿತ್ತು. ಅದರಲ್ಲಿ ಭೂ ಸುಧಾರಣೆ ಕಾಯ್ದೆಯಡಿ 11,835 ಎಕರೆ, ಇನಾಮ್ ರದ್ಧತಿ ಕಾಯ್ದೆಯಡಿ 1459 ಎಕರೆ 26 ಗುಂಟೆ ರೈತರಿಗೆ ಮಂಜೂರಾಗಿದೆ. 133 ಎಕರೆ 17 ಗುಂಟೆ ಬೇರೆ ಬೇರೆ ಯೋಜನೆಗಳಿಗೆ ಭೂ ಸ್ವಾಧೀನವಾಗಿ ಪರಿಹಾರ ನೀಡಲಾಗಿದೆ. ಈ ಮೂರು ವಿಭಾಗಗಳಲ್ಲಿ ಹಂಚಿಕೆಯಾಗಿರುವ ಭೂಮಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ರೈತರಿಗೆ ಮಂಜೂರಾಗಿರುವ ಜಮೀನನ್ನು ವಾಪಸ್ ಪಡೆಯುವ ಉದ್ದೇಶ ಸರಕಾರಕ್ಕಾಗಲಿ, ವಕ್ಫ್ ಸಚಿವರಿಗಾಗಲಿ ಇಲ್ಲ. – ಕೃಷ್ಣ ಬೈರೇಗೌಡ, ಕಂದಾಯ ಸಚಿವರು.

ಯಾದಗಿರಿ: ಬಿಜಾಪೂರದಲ್ಲಿ ವಕ್ಸ್ ಆಸ್ತಿ ವಿವಾದ ಸೃಷ್ಟಿಸುವ ಮೂಲಕ ರಾಜ್ಯ ಸರ್ಕಾರ ಯಾರನ್ನೋ ಒಲೈಸುವ ನಿಟ್ಟಿನಲ್ಲಿ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಕಿಡಿಕಾರಿದ್ದಾರೆ.

ಯಾದಗಿರಿ ನಗರದಲ್ಲಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜಾಪೂರದಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಸೇರಿಸಲಾದರೆ, ಯಾದಗಿರಿಯಲ್ಲಿ ವಕ್ಸ್ ಆಸ್ತಿಗಳನ್ನು ರಿಯಲ್ ಎಸ್ಟೇಟ್‌ನವರಿಗೆ ಮಾರಾಟ ಮಾಡುವ ಧಂದೆ ನಡೆದಿದೆ ಎಂದು ದೂರಿದರು.

ಈ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕು. ರೈತರಿಗೆ ಯಾವುದೇ ಸಂದರ್ಭದಲ್ಲಿ ಅನ್ಯಾಯವಾದರೆ ಸಹಿಸುವುದಿಲ್ಲ, ಈ ಬಗ್ಗೆ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಬಗ್ಗೆ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗುತ್ತದೆ. ಮೈತ್ರಿ ಪಕ್ಷದ ಮುಖಂಡರು ಈ ಬಗ್ಗೆ ಧ್ವನಿ ಎತ್ತಲಿದ್ದಾರೆ. ಇದರ ವಿರುದ್ಧ ಸದನದ ಹೊರಗೆ ಮತ್ತು ಒಳಗೆ ನನ್ನ ಹೋರಾಟ ಮುಂದುವರೆಯುತ್ತದೆ. ಯಾದಗಿರಿಯಲ್ಲಿನ ವಕ್ಸ್ ಆಸ್ತಿಯ ವಿವರ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಯಾರಿಗೂ ಅನ್ಯಾಯವಾಗದಂತೆ ನಮ್ಮ ಹೋರಾಟ ನಡೆಯುತ್ತದೆ ಎಂದರು.

ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ವಿಶೇಷವಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಜಯಗಳಿಸುವುದು ನಿಶ್ಚಿತ. ಚಳಿಗಾಲ ಅಧಿವೇಶನದಲ್ಲಿ ಅವರು ಶಾಸಕರಾಗಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ನಲ್ಲಿನ ಒಗ್ಗಟ್ಟಿನ ವೈಫಲ್ಯತೆಯಿಂದ ಆ ಪಕ್ಷಕ್ಕೆ ಸೋಲಾಗಲಿದೆ ಎಂದರು.

ಕಾಂಗ್ರೆಸ್‌ಗೆ 8 ಶಾಸಕರು ಬರಲಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಕುಮಾರಣ್ಣ ಮತ್ತು ವಿಜಯೇಂದ್ರ ಅವರೊಂದಿಗೆ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ. ಅವರು 8 ಜನರನ್ನು ಕರೆದುಕೊಂಡು ಹೋದರೆ ನಾವು 20 ಶಾಸಕರನ್ನು ಬರಮಾಡಿಕೊಳ್ಳುತ್ತೇವೆ ಎಂದು ಸವಾಲ್ ಹಾಕಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇರುವರೆಗೆ ಕಾಂಗ್ರೆಸ್ ಸರ್ಕಾರ ಇರುತ್ತದೆ ಎಂದರು.

Spread the love

Leave a Reply

Your email address will not be published. Required fields are marked *

error: Content is protected !!