ಆರೋಗ್ಯ, ಸಂಬಂಧ, ಸಾಮರಸ್ಯ, ಸಂಭ್ರಮಗಳು ಬೆಳೆಸುವ ಹಬ್ಬ | ಜೀವನದ ಮೇಲೆ ಋತುಮಾನದ ಆಚರಣೆಗಳ ಪ್ರಭಾವ
✍️ ಮಹಾದೇವಯ್ಯ ಕರದಳ್ಳಿ, ಸ್ವದೇಶಿ ಚಿಂತಕರು ಕಲಬುರಗಿ.
ರೈತರಿಗೆ ಒಂದೆಡೆ ಮುಂಗಾರು ಸುಗ್ಗಿ ಮುಗಿದ ಸಂಭ್ರಮ, ಮತ್ತೊಂದೆಡೆ ಹಿಂಗಾರು ಬೆಳೆಗಳು ತಮ್ಮ ಹೊಲದಲ್ಲಿ ನಳನಳಿ ಸುವುದನ್ನು ನೋಡುವ ಸಡಗರದ ಕಾಲವೇ ಎಳ್ಳ ಅಮಾವಾಸ್ಯೆಯ ಸುಸಂದರ್ಭ. ಇಂದು ಶುಕ್ರವಾರ ಕಲ್ಯಾಣ ಕರ್ನಾಟಕದ ಬಹುತೇಕ ಗ್ರಾಮೀಣ ಭಾಗದ ರೈತರು ಹರ್ಷೋಲ್ಲಾಸದಿಂದ ಹಬ್ಬ ಆಚರಿಸುವುದು ಕಾಣುತ್ತೇವೆ.
ಸನಾತನರ ಚಿಂತನೆಯಲ್ಲಿ ಆಹಾರವೇ ಆರೋಗ್ಯ ಕಾರಣ ಋತುಮಾನದಲ್ಲಿ ರೋಗ ನಿರೋಧಕ ಹೆಚ್ಚಿಸಲು ಅಗತ್ಯ ಮತ್ತು ಸ್ಥಾನೀಯವಾಗಿ ಬೆಳೆವ ಆಹಾರಗಳನ್ನು ನೈವದ್ಯ ಮಾಡಿ ಬಡಿಸುತ್ತಾರೆ. ಆ ಋತುವಿನಲ್ಲಿ ಆ ಆಹಾರ ಬಳಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಸಂದೇಶ ನೈವೆದ್ಯದಲ್ಲಿ ಬಳಸುವ ಪದಾರ್ಥಗಳಲ್ಲಿಡಗಿದೆ. ಪರಿವಾರದ ಸದಸ್ಯರಲ್ಲಿ ಸೌಹಾರ್ದ ಸಂಬಂಧ ವೃದ್ಧಿಸುವ ಹಬ್ಬ. ಸರಳ ಜೀವನ ಉನ್ನತ ಚಿಂತನೆಗೆ ಬದುಕಿಗೆ ಬೇಕಾದ ಮಂತ್ರಗಳು ಎಂದು ತಿಳಿಸುವ ಹಬ್ಬ.
ಕೃಷಿ ಜೀವನಶೈಲಿಯಲ್ಲಿ ಕಾಯಕ ಮತ್ತು ದಾಸೋಹ ಸೂತ್ರಗಳಿವೆ. ಪರ ಹಿತದಲ್ಲಿ ತನ್ನ ಹಿತ ಕಾಣುವ ಕೃಷಿ ಜೀವನಶೈಲಿ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆರೋಗ್ಯ, ಸಂಬಂಧ, ಸಂಭ್ರಮಗಳು ಎಳ್ಳ ಅಮವಾಸ್ಯ ಆಚರಣೆಯಲ್ಲಿವೆ. ಹೇಮಂತ ಋತು ಅಂದರೆ ಚಳಿ(ಮಾಗಿ)ಗಾಲ ಅಂತ್ಯದಲ್ಲಿ ಬೇಸಿಗೆಯ ಆರಂಭಕ್ಕೆ ಮುನ್ನುಡಿ ಬರೆವ ಉತ್ತರಾಯಣ ಬರುವ ಕಾಲವಾಗಿದೆ.
ಎಳ್ಳ ಅಮಾವಸ್ಯೆಯಿಂದ ಪ್ರತಿದಿನ ಎಳ್ಳುಕಾಳಿನಷ್ಟು ಹಗಲು, ಬಿಸಿ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಗ್ರಾಮೀಣರ, ರೈತರ ಏಳಿಗೆ ಹಂತ ಹಂತವಾಗಿ ಎಳ್ಳುಕಾಳಿನಿಂದ ಎಳುಕೋಟಿಯಷ್ಟು ವೃದ್ಧಿಸಲಿ ಎಂಬ ಸದೀಚ್ಛೆ ಸನಾತನರು ರೂಢಿಸಿದ ಎಳ್ಳ ಅಮವಾಸ್ಯೆ ಆಚರಣೆಯ ಆಂತರ್ಯವಾಗಿದೆ.
ಮಳೆ, ಚಳಿ, ಬಿಸಿಲು ಎನೇ ಇರಲಿ ಸೂಟು ಬೂಟು ಇರಲಿ, ಹಬ್ಬ ಯಾವುದೇ ಇರಲಿ ಬಾಯಿ ಸಿಹಿ ಮಾಡಿಕೊಳ್ಳಲು ಡೈರಿ ಮಿಲ್ಕ ಚಾಕಲೇಟ ಬೇಕು. ಸಮಾರಂಭ ಯಾವುದೇ ಇರಲಿ, ಕೇಕ್ ಬೇಕೆ ಬೇಕು. ಪಾರ್ಟಿ ಅಂದರೆ ಪಿಜ್ಜಾ ಬರ್ಗರ, ಜೊತೆಗೆ ಪೆಪ್ಸಿ, ಕೋಲಾಗಳೇ ಬೇಕು ;ಎಂಬ ಜಾಹಿರಾತುಗಳನ್ನು ನೋಡಿ ಅಜೀರ್ಣ, ಅನಾರೋಗ್ಯಕರ ತಿಂಡಿ ತಿನಿಸು ತಿಂದು ರೋಗಗಳಿಗೆ ಸ್ವಾಗತತಿಸುತ್ತಿದ್ದೇವೆ.
ಆಹಾರವೇ ಆರೋಗ್ಯದ ಎಂಬ ಆರೋಗ್ಯ ಶೈಲಿಗೆ ಬದಲಾಗಿ ಔಷದವನ್ನೇ ಆಹಾರವಾಗಿಸಿಕೊಂಡು ಮೂರುಹೊತ್ತು ಗುಳಿಗೆ ಸೇವಿಸುತ್ತ ಬದುಕುತ್ತಿದ್ದೆವೆ. ಮೇಲಾಗಿ ನಮ್ಮತನ ಸ್ವಂತಿಕೆ ಕಳೆದು ಕೊಳ್ಳುತ್ತಿದ್ದೇವೆ. ನಮ್ಮ ಗ್ರಾಮದ ಸಂಪತ್ತು ವಿದೇಶಿ ಕಂಪನಿಗಳ ಪಾಲಾಗುತ್ತಿವೆ. ಜಮೀನದಾರನಾಗಿದ್ದ ರೈತ ಕಂಪನಿಗಳಲ್ಲಿ, ಕಚೇರಿಗಳಲ್ಲಿ ದುಡಿವ ಗುಲಾಮನಾಗುತ್ತಿದ್ದಾನೆ. ಭಾರತೀಯ ಪರಂಪರೆಯಲ್ಲಿ ಋತುಮಾನಕ್ಕೆ ತಕ್ಕಂತೆ ಊಟ ಮಾಡಬೇಕು. ಉಡುಗೆ ತೊಡ ಬೇಕು. ಆಗ ಶರೀರ ಆರೋಗ್ಯ, ಶರೀರ ಸೌಂದರ್ಯ ವಧಿಸುತ್ತದೆ. ಹಬ್ಬ ಹರಿದಿನ ಮತ್ತು ಉತ್ಸವಗಳ ಆಚರಣೆಯಿಂದ ಉತ್ಸಾಹ ಹೆಚ್ಚುತ್ತದೆ. ಸತ್ಸಂಗ ದೊರೆಯುತ್ತದೆ. ಮನಸ್ಸು ಪ್ರಫುಲ್ಲ ವಾಗಿ ಮನಸ್ಸಿನ ಭಾರ ಹಗುರವಾಗುತ್ತದೆ.
ನಮ್ಮ ಹಬ್ಬಗಳ ಅರ್ಥವತ್ತಾದ ಆಚರಣೆಯಿಂದ ಆರೋಗ್ಯ ರಕ್ಷಣೆ ಜೊತೆಗೆ VOCAL FOR LOCAL – ಪ್ರದೇಶದ ಆರ್ಥಿಕತೆಗೆ ಬಲಬಂದು ಸಹಜವಾಗಿ ಸಶಕ್ತೀಕರಣ ಸಾಧಿಸಿದಂತಾಗುತ್ತದೆ ಎಂಬ ಚಿಂತನೆ ನಮ್ಮ ಸನಾತನರದ್ದು. ಈ ಚಿಂತನೆಯನ್ನು ಭಾರತದ ಯುವಪಿಳೀಗೆಗೆ ತಲುಪಿಸಬೇಕಾದರೆ ಭಾಷಣದಿಂದ ಸಾಧ್ಯವಿಲ್ಲ. ಪ್ರತ್ಯಕ್ಷ ಆಚರಣೆಯಿಂದ ಮಾತ್ರ ಸಾಧ್ಯವೆಂಬ ಸತ್ಯ ಅರಿತು ಆಚರಿಸಬೇಕಾಗಿದೆ. ನಾವೆಲ್ಲ ಎಳ್ಳಅಮವಾಸ್ಯೆ ಸಡಗರ ಸಂಭ್ರಮದಿಂದ ಆಚರಿಸೋಣ. ಸಂತೋಷದಿಂದ ಬದುಕೋಣ. ಬದುಕನ್ನು ಸಮರ್ಥವಾಗಿ ಎದುರಿಸೋಣ.
