ಬ್ರಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಕರೆ |ಹೆಡಗಿಮದ್ರಾದಲ್ಲಿ ಧರ್ಮ ಸಿಂಚನ ಸಭೆ
ಯಾದಗಿರಿ: ಧರ್ಮ ರಕ್ಷಣೆಯ ಮಹತ್ಕಾರ್ಯಕ್ಕೆ ಯುವ ಜನಾಂಗ ಕಂಕಣ ಬದ್ದರಾಗಬೇಕಿದೆ ಎಂದು ರಾಯಚೂರು ಕಿಲ್ಲಾ ಬ್ರಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಕರೆ ನೀಡಿದರು.
ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಜರುಗಿದ ಶ್ರೀ ಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ರಥೋತ್ಸವದ ನಂತರ ಆಯೋಜಿಸಿದ್ದ ಧರ್ಮ ಸಿಂಚನ ಸಭೆಯಲ್ಲಿ ಆಶಿರ್ವಚನ ನೀಡಿದ ಅವರು, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಭಕ್ತರು ಶ್ರೀಮಠ ದಿಂದ ಇಲ್ಲಿನ ಗುರುಗಳನ್ನು ಬಿಟ್ಟುಕೊಡುಲು ಹೋಗಬೇಡಿ. ಶ್ರೀಗಳು ಧರ್ಮ ಕೈಂಕರ್ಯದಿಂದ ಇಲ್ಲಿನ ಮಠ ಮುಂದಿನ ದಿನಗಳಲ್ಲಿ ಭೂ ಕೈಲಾಸವಾಗಲಿದೆ ಎಂದರು.
ಮಠಗಳಿಗೆ ಭಕ್ತರೇ ಬಹುದೊಡ್ಡ ಆಸ್ತಿ. ಮಠದ ಒಳಗೆ ಕುಳಿತವರು ಶಾಂತ ಶಿವಯೋಗಿಗಳಾದರೆ, ಹೊರಗಡೆ ಇದ್ದವರು ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು. ಅಲ್ಲದೆ ಮಾತನಾಡುವ ನಾನೂ ಸಹ ಶಾಂತಮಲ್ಲ ಶಿವಾಚಾರ್ಯರು. ಹೀಗಾಗಿ ಇಲ್ಲೇ ತ್ರಿವೇಣಿ ಸಂಗಮವಾಗಿದ್ದು, ಮುಂದಿನ ದಿನಗಳಗಳಲ್ಲಿ ಈ ಜಾತ್ರೆಯೂ ಸಹ ಕುಂಭಮೇಳದಂತೆ ಕಂಗೊಳಿಸಲಿದೆ ಎಂದು ತಿಳಿಸಿದರು.
ನಾಡಿನ ಮಠಗಳು ತ್ರೀವಿಧ ದಾಸೋಹ ಮಾಡುವ ಮೂಲಕ ಭಕ್ತ ವರ್ಗದ ಹಿತವನ್ನೇ ಬಯಸುತ್ತವೆ. ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ನಾವು ಧರ್ಮ ರಕ್ಷಿಸಿದರೆ, ನಮ್ಮನ್ನು ಧರ್ಮ ಖಂಡಿತ ರಕ್ಷಣೆ ಮಾಡಲಿದೆ.- ಶ್ರೀ ಶಾಂತಮಲ್ಲ ಶಿವಾಚಾರ್ಯರು ಕಿಲ್ಲಾ ಬ್ರಹನ್ಮಠ ರಾಯಚೂರು.
ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಮಾತನಾಡಿ, ಮಠದ ಶ್ರೀಗಳು ಧಾರ್ಮಿಕ ಕಾರ್ಯಗಳ ಜತೆಯಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸುತ್ತಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಮುಂದಿನ ವರ್ಷ ಈ ಮಠದಲ್ಲಿ ನೂತನ ಕಲ್ಯಾಣ ಮಂಟಪ ಉದ್ಘಾಟನೆ ಜತೆಗೆ ದೇವಸ್ಥಾನದ ಭವ್ಯ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಜಾತ್ರೆ, ಉತ್ಸವಗಳಿಂದ ಸಮಾಜದಲ್ಲಿ ಸಾಮರಸ್ಯ ವೃದ್ಧಿಯಾಗುತ್ತದೆ. ಪವಾಡ ಪುರುಷ ಶ್ರೀ ಶಾಂತ ಶಿವಯೋಗಿ ಸ್ವಾಮಿಗಳ ಕೃಪೆ ನಮ್ಮೆಲ್ಲರ ಮೇಲಿರಲಿ ಎಂದು ತಿಳಿಸಿದರು.
ಶ್ರೀಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ರೈತ ಬೆಳೆದ ಬೆಳೆಗೆ ಇಂದು ವೈಜ್ಞಾನಿಕ ದರ ಸಿಗುತ್ತಿಲ್ಲ ಎಂಬ ಕೊರಗು ನಮಗೆ ಸದಾಕಾಲ ಕಾಡುತ್ತಿದೆ. ಕೆಲವರು ನಮ್ಮ ಮಠಕ್ಕೆ ಆಸ್ತಿ ಇಲ್ಲ ಎನ್ನುತ್ತಾರೆ. ಆದರೆ, ಗ್ರಾಮದ ಭಕ್ತರು ಬೆಳೆದ ಬೆಳೆಗಳು ಮಠದ ಆವರಣದಲ್ಲಿ ತಂದಿಡುತ್ತಾರೆ. ಅವರ ಬೆಳೆ ನಾನು ರಕ್ಷಣೆ ಮಾಡಿದರೆ, ನಮ್ಮ ಮಠ ಭಕ್ತರು ರಕ್ಷಿಸುತ್ತಿದ್ದಾರೆ ಎಂದು ಹೇಳಿದರು.
ಈ ವರ್ಷದಿಂದ ಶಾಂತ ಶಿವಯೋಗಿ ಸೇವಾ ಸಮಿತಿ ರಚನೆ ಮಾಡಲಾಗಿದ್ದು, ಮೇ.21 ರಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ. ಮಠದ ಪ್ರತಿ ಕಾರ್ಯಕ್ರಮಗಳ ಯಶಸ್ಸಿಗೆ ಅನೇಕ ಭಕ್ತರು ಶ್ರಮಿಸುತ್ತಿದ್ದಾರೆ. ಅದನ್ನು ಶಾಂತ ಶಿವಯೋಗಿಶ್ವರ ನೋಡಿದ್ದಾನೆ. ನಿಮಗೆ ಆಶಿರ್ವಾದ ಮಾಡಲಿದ್ದಾನೆ ಎಂದು ಹೇಳಿದರು.
ಪ್ರಮುಖರಾದ ನಾಗರತ್ನ ಕುಪ್ಪಿ, ಬಸ್ಸುಗೌಡ ಬಿಳ್ಹಾರ, ಚನ್ನಪ್ಪ ಗೌಡ ಮೋಸಂಬಿ, ಕವಿತಾ ಮಾಲೀ ಪಾಟೀಲ ಮಾತನಾಡಿದರು.
ಈ ವೇಳೆ ರಾಮರಡ್ಡಿ ತಂಗಡಗಿ, ಎಚ್.ಕುಮಾರಪ್ಪ, ಬಾವರಾಜ ಚಂಡರಕಿ, ಭೀಮನಗೌಡ ಕ್ಯಾತನಾಳ, ಮಲ್ಲನಗೌಡ ಹಳಿಮನಿ, ಬಸವಂತರಡ್ಡಿ ಕಾರಡ್ಡಿ, ವೆಂಕಟರಡ್ಡಿ ಪಾಟೀಲ, ರಾಜುಗೌಡ ಚಾಮನಾಳ, ಪಿಡಿಒ ಶಿವಕುಮಾರ, ನೀಲಕಂಠ ಶಹಾಪುರಕರ ಇದ್ದರು. ಗಿರೀಶ ಪಾಟೀಲ್ ಸ್ವಾಗತಿಸಿದರು. ಅಮರಯ್ಯಾ ಸ್ವಾಮಿ ನಿರೂಪಿಸಿದರು.
ಬೋಂದಿ, ಹುಗ್ಗಿ ಸವಿದ ಭಕ್ತಗಣ : ಜಾತ್ರೆಗೆ ಬಂದ ಸಾವಿರಾರು ಭಕ್ತರಿಗೆ ಈ ವರ್ಷ ಬೋಂದಿ, ಗೋಧಿ ಹುಗ್ಗಿ, ಸಜ್ಜಕಾ, ಅನ್ನಾ ಸಾಂಬಾರ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ ಮಾನ್ಯ ಪಾಟೀಲ್ ಅವರ ಕಲಾ ತಂಡದಿಂದ ನಡೆದ ರಸಮಂಜರಿ ಕಾರ್ಯಕ್ರಮ ಜನಮನ ಸೆಳೆಯಿತು.
