ವಿಪರೀತ ಮಂಗಗಳ ಕಾಟ | ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಕರೆ ಮಾಡಿ ಮಾತು | ಶುದ್ಧ ನೀರಿನ ಘಟಕ ಶೀಘ್ರ ದುರಸ್ತಿಗೆ ಸೂಚನೆ

ಯಾದಗಿರಿ:  ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಲಸತ್ತಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಾಡಿಯಾ ಅವರು ಭೇಟಿ ನೀಡಿದರು.

ಯಲಸತ್ತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರ ಜೊತೆ ವಿವಿಧ ಸಮಸ್ಯೆಗಳು ಕುರಿತು ಚರ್ಚೆ ನಡೆಸಿದ ಅವರು ಗ್ರಾಮದಲ್ಲಿ ಕೋತಿಗಳ ಕಾಟ ಅಧಿಕವಾಗಿದ್ದು, ದಿನನಿತ್ಯ ಜನರಿಗೆ ತೊಂದರೆ ಕೊಡುತ್ತಿವೆ.  ಗ್ರಾಮಸ್ಥರಿಗೆ ಸ್ಪಂದಿಸಿದವರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಗ್ರಾಮದಲ್ಲಿ ಕೋತಿಗಳನ್ನು ಹಿಡಿಯಲು ವಿಶೇಷ ತಂಡ ಕರೆಸಿ ಸೆರೆ ಹಿಡಿಯುವ ಬಗ್ಗೆ ಚರ್ಚಿಸಿದರು.

ಕೂಲಿಕಾರರಿಗೆ ಶೀಘ್ರವೇ ಎನ್ಎಂಆರ್ ತೆಗೆದು ಕೆಲಸ ಕೊಡುವಂತೆ ಪಿಡಿಓ ಅವರಿಗೆ ಸೂಚಿಸಿದರು. ಸ್ವಚ್ಛ ವಾಹಿನಿ ಮೂಲಕ ದಿನನಿತ್ಯ ಕಸ ಸಂಗ್ರಹ ಮಾಡಿ, ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು. ಕರವಸೂಲಿ ಮಾಡುವುದು, ಎನ್ ಆರ್ ಎಲ್ ಎಂಅಡಿ ಮಹಿಳಾ ಒಕ್ಕೂಟಗಳಿಗೆ ಸಾಲ ನೀಡುವುದು. ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ಪಡೆದರು.
ಆನಂತರ ಶುದ್ಧ ಕುಡಿವ ನೀರಿನ ಘಟಕಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಶೀಘ್ರವೇ ಆರಂಭಿಸುವಂತೆ ಸೂಚಿಸಿದರು.

ಮುಂದೆ ಗ್ರಂಥಾಲಯಕ್ಕೆ ತೆರಳಿದ ಅವರು ಎಲ್ಲಾ ಪುಸ್ತಕಗಳನ್ನು ಒಂದೇ ಕಡೆ ಸೇರಿಸಿ ಇಡಬಾರದು, ಸ್ಪರ್ಧಾತ್ಮಕ ಪುಸ್ತಕಗಳು, ಕಾದಂಬರಿಗಳು ಪುಸ್ತಕಗಳು ಪ್ರತ್ಯೇಕವಾಗಿಡಬೇಕು ಎಂದು ಅಲ್ಲಿನ ಗ್ರಂಥಪಾಲಕರಿಗೆ ತಿಳಿಸಿದರು. ವಿದ್ಯುತ್ ವ್ಯವಸ್ಥೆ ಕುರಿತು ಪರಿಶೀಲಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ದಿನಚರಿ, ಹೊರರೋಗಿಗಳ ಪುಸ್ತಕ ವೀಕ್ಷಣೆ ಮಾಡಿದರು. ಅಂಗನವಾಡಿ ಕೇಂದ್ರಗಳಿಗೆ ಹಾಗೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತೆರಳಿ ಶಾಲಾ ಕಟ್ಟಡ ವೀಕ್ಷಣೆ ಮಾಡಿದರು. ಮನರೇಗಾ ಅನುದಾನದಡಿ ನಿರ್ಮಾಣ ಹಂತದಲ್ಲಿರುವ ಬಾಲಕ ಬಾಲಕಿಯರ ಶೌಚಾಲಯಗಳು ವೀಕ್ಷಿಸಿದರು. ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. 10ನೇ ತರಗತಿ ವಿದ್ಯಾರ್ಥಿಗಳ ಜೊತೆ ಚರ್ಚಿಸಿದ ಅವರು ಈ ಬಾರಿ ನೂರಕ್ಕೆ ನೂರರಷ್ಟು ಫಲಿತಾಂಶ ಬರಬೇಕು. ಆದ್ದರಿಂದ ಕಠಿಣವಾದ ವಿಷಯಗಳನ್ನು ಹೆಚ್ಚಿನ ಗಮನ ಕೊಟ್ಟು ಅಧ್ಯಯನ ಮಾಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಸಿಬಿ ದೇವರಮನಿ, ಗುರುಮಠಕಲ್ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಪಾಟೀಲ್, ತಾ.ಪಂ ಎಡಿ ರಾಮಚಂದ್ರ ಬಸೂದೆ, ಯಲ್ಲಸತ್ತಿ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಯಾದಗಿರಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೈಯದ್ ಅಲಿ ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತು ಮನರೇಗಾ ಸಿಬ್ಬಂದಿಗಳು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!