ಅಯೋಧ್ಯೆಯಲ್ಲಿ ಝಗಮಗಿಸಿದ 25 ಲಕ್ಷ ಕ್ಕೂ ಹೆಚ್ಚು ದೀಪ, ದರ್ಶನ ಪಡೆದು ಪುನಿತರಾದ ಅಪಾರ ಭಕ್ತ ಸಾಗರ
500 ವರ್ಷಗಳ ನಂತರ ಶ್ರೀ ರಾಮಲಲಾ ಅವರ ಭವ್ಯವಾದ ದೇವಾಲಯದಲ್ಲಿ ಪುನರ್ ಪ್ರತಿಷ್ಠಾಪಿಸಿದ ನಂತರ ಇದು ಮೊದಲ ಬೆಳಕಿನ ಹಬ್ಬವಾಗಿದೆ. ಅದ್ಭುತವಾಗಿ ಪ್ರಜ್ವಲಿಸುವ ಶ್ರೀ ಅಯೋಧ್ಯಾ ಧಾಮದ ಈ ದಿವ್ಯ-ಭವ್ಯವಾದ ರೂಪವು ನಮಗೆಲ್ಲರಿಗೂ ತ್ರೇತಾಯುಗದ ಅನುಭವವನ್ನು ನೀಡುತ್ತಿದೆ. ಇಂದು ಅಯೋಧ್ಯೆ ಸಂತೋಷವಾಗಿದೆ. ಇಡೀ ಭಾರತವೇ ಹೆಮ್ಮೆ ಪಡುತ್ತಿದೆ. – ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ.
ಅಯೋಧ್ಯ(ಉ.ಪ್ರ): ಕಣ್ಣು ಹಾಯಿಸಿದಲ್ಲೆಲ್ಲಾ ಝಗಮಗ ದೀಪಗಳು, ಸರಯೂ ನದಿ ದಡದಲ್ಲಿ ಕಿಕ್ಕಿರಿದ ಜನ ಸಾಗರ ಕಂಡಿದ್ದು ಪುಣ್ಯ ನಗರಿ ಅಯೋಧ್ಯೆಯಲ್ಲಿ…..
ಹೌದು, 500 ವರ್ಷಗಳ ನಂತರ ಪ್ರಭು ಶ್ರೀ ರಾಮ ಭವ್ಯ ಮಂದಿರ ನಿರ್ಮಾಣದ ಬಳಿಕ ಮೊದಲ ವರ್ಷ ಆಚರಿಸ್ಪಡುತ್ತಿರುವ ದೀಪಾವಳಿ ವಿಶ್ವ ದಾಖಲೆ ನಿರ್ಮಿಸಿದೆ.
ದೀಪಾವಳಿ ಹಿನ್ನೆಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಆಯೋಜಿಸಿದ್ದ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ಅಯೋಧ್ಯಾ ಧಾಮವು ಸನಾತನ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದೆ. ದೀಪೋತ್ಸವ ಅಂಗವಾಗಿ 25 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಯೋಗಿಜಿ ಅಭಿಪ್ರಾಯ ಪಟ್ಟಿದ್ದಾರೆ.
ವಿಶೇಷವಾಗಿ 1,121 ಭಕ್ತರು ಒಟ್ಟಾಗಿ ಸರಯೂ ಮಾತೆಯ ಆರತಿ ಮಾಡುವ ಭಾಗ್ಯ ಪಡೆಯುವ ಮೂಲಕ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ ಎಂದಿದ್ದಾರೆ.
ಪೂಜ್ಯ ಸಂತರು, ಧಾರ್ಮಿಕ ವಿಧ್ವಾಂಸರ ಆಶೀರ್ವಾದ ಮತ್ತು ರಾಮ ಭಕ್ತರ ಪ್ರಯತ್ನದಿಂದ ಸಾಧಿಸಿದ ಈ ಸಾಧನೆಗಾಗಿ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.