ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನರಸರೆಡ್ಡಿ ಪೊಲೀಸ್ ಪಾಟೀಲ್ ಅವರಿಂದ | ಬೆಂಗಳೂರಿನಲ್ಲಿ ಕೃಷಿ ಸಚಿವರ ಭೇಟಿ
ಬೆಂಗಳೂರು: ಕಲಬುರಗಿಯ ತೊಗರಿ ಮಂಡಳಿಗೆ ಕಾಯಕಲ್ಪ ನೀಡಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನರಸರೆಡ್ಡಿ ಪೊಲೀಸ್ ಪಾಟೀಲ್ ಅವರು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಅವರು, ತೊಗರಿ ಬೆಳೆಗೆ ಉತ್ತೇಜನ ನೀಡಲು ಎರಡು ದಶಕಗಳ ಹಿಂದೆ ಕಲಬುರಗಿಯಲ್ಲಿ ಆರಂಭವಾಗಿರುವ ತೊಗರಿ ಅಭಿವೃದ್ಧಿ ಮಂಡಳಿಗೆ ಅನುದಾನವಿಲ್ಲದೆ ಸೊರಗಿ ಸುಣ್ಣವಾಗಿದೆ.
ತೊಗರಿ ಖರೀದಿ ವಿಸ್ತರಣೆ ಚಟುವಟಿಕೆ ಸೇರಿ ಯಾವುದೇ ಕೆಲಸ ಇಲ್ಲದೇ ಬಿಳಿ ಆನೆ ಆದಂತಾಗಿದೆ ರಾಜ್ಯ- ರಾಷ್ಟ್ರದಾದ್ಯಂತ ಉತ್ಕೃಷ್ಟವಾದ ಇಲ್ಲಿನ ತೊಗರಿ ಪೂರೈಕೆಯಾಗುತ್ತಿದೆ.
ಆದ್ದರಿಂದ ಕಲ್ಯಾಣ ಕರ್ನಾಟಕದ ಆರ್ಥಿಕತೆ ನಿಂತಿರುವುದೇ ತೊಗರಿ ಮೇಲೆ ಆದರೆ ತೊಗರಿ ಬೆಳೆಗಾರರ ಬದುಕು ಹಸನಾಗಿಲ್ಲ. ಕಾರಣ ಅನುದಾನವೂ ಇಲ್ಲ. ಸಿಬ್ಬಂದಿಯೂ ಇಲ್ಲದೇ ಸೊರಗಿ ಹೋಗಿರುವುದರಿಂದ ಕೂಡಲೇ ಅನುದಾನ ನೀಡಿ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಐ ಟ್ಯಾಗ್ ಹೊಂದಿರುವ ತೊಗರಿಗೆ ಬ್ರಾಂಡಿಂಗ್ ಮಾಡಿ ಪ್ರೋತ್ಸಾಹಿಸಲು ಕೆ.ಎಮ್.ಎಫ್. (KMF) ಮಾದರಿಯಲ್ಲಿ ಮಂಡಳಿಯನ್ನು ಪುನಾರಚನೆ ಮಾಡಿ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲು ರೈತರ ಪರವಾಗಿ ಮನವಿ ಮಾಡಿದ್ದಾರೆ.
