ಬೋರಬಂಡ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ವೈಭವದ ವೈಕುಂಠ ಏಕಾದಶಿ ಆಚರಣೆಗೆ ನಿರ್ಧಾರ
ಗುರುಮಠಕಲ್ : ವೈಭವಯುತವಾಗಿ ವೈಕುಂಠ ಏಕಾದಶಿಯನ್ನು ಬೋರಬಂಡ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪಕ ನರೇಂದ್ರ ರಾಠೋಡ ಹೇಳಿದರು.
ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳಿಗೆ ಏಕಾದಶಿ ಪ್ರವಿತ್ರ ದಿನವಾಗಿದ್ದು, ಇದರ ಮಹತ್ವವನ್ನು ಜನರಿಗೆ ಸಾರುವ ಉದ್ದೇಶದಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಡಿ. 30ರಂದು ಬೆಳಿಗ್ಗೆ 5:30 ಸುಪ್ರಭಾತ ಸೇವೆ ನಂತರ 9 ಗಂಟೆಗೆ ವೈಕುಂಠದ್ವಾರ ಉದ್ಘಾಟನೆ. ಸಂಜೆ 6 ಗಂಟೆಯಿಂದ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀದೇವಿ, ಭೂದೇವಿ ಹಾಗೂ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರಿಗೆ ಪಲ್ಲಕಿ ಸೇವೆ ಬಳಿಕ ರಾತ್ರಿ 8 ಗಂಟೆಗೆ ಮಹಾಮಂಗಳ ಆರತಿ ನೆರವೇರಲಿದೆ ಎಂದು ವಿವರಿಸಿದರು.
ಹಿಂದುಗಳ ಪವಿತ್ರ ದಿನವಾದ ಏಕಾದಶಿಯಂದು ಗುರುಮಠಕಲ್, ಯಾದಗಿರಿ, ರಾಯಚೂರ, ಬೀದರ ಸೇರಿದಂತೆ ನೆರೆಯ ತೆಲಂಗಾಣದಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನಿತರಾಗಬೇಕು ಎಂದು ತಿಳಿಸಿದರು.
