ಗುರುಮಠಕಲ್ : ಬೇಸಿಗೆ ಕಾಲದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಗುರುಮಠಕಲ್ ತಾಲೂಕಿನ ತಹಸಿಲ್ದಾರ್ ಚನ್ನಮಲ್ಲಪ್ಪ ಘಂಟಿ ಪಿಡಿಒಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಬೇಸಿಗೆ ಪ್ರಾರಂಭದಲ್ಲಿ ಕುಡಿಯುವ ನೀರಿನ ಮುಂಜಾಗ್ರತ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಲ್ಲ ಗ್ರಾಮ ಪಂಚಾಯಿತಿ ಗಳಲ್ಲಿ ನೀರಿನ ಮಟ್ಟ ವಿವರ ಕೈಗೊಳ್ಳಬೇಕಾದ ಕ್ರಮಗಳು ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಪಾಟೀಲ್ ಮಾತನಾಡಿ, ಕಳೆದ ವರ್ಷ 2025 ಮಾರ್ಚ್ ನಿಂದ ಜೂನ್ ವರೆಗೆ 13 ಗ್ರಾಮ ಪಂಚಾಯಿತಿಗಳಲ್ಲಿ ಕುಡಿವ ನೀರಿನ ಸಮಸ್ಯೆಯಾಗಿದೆ. ಈ ಬಾರಿ ಬೇಸಿಗೆ ಆರಂಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.
ಅಜಲಾಪುರ ಗ್ರಾಮದ ತುರುಕನ ದೊಡ್ಡಿ ಮತ್ತು ಬದ್ಯಪಲ್ಲಿ ತಾಂಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೊಸ ಬೋರ್ವೆಲ್ ಹಾಕಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತಿಳಿಸಿದರು.
ಚಂಡರಕಿ ಗ್ರಾಮದ ವಾರ್ಡ್ ನಂಬರ್ 1 ಮತ್ತು 4 ರಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಹೊಸ ಬೋರಿಂಗ್ ಹಾಕಬೇಕಿದೆ ಮತ್ತು ಪೈಪ್ ಲೈನ್ ಮಾಡಿಸಬೇಕಿದೆ ಎಂದು ಪಿಡಿಓ ತಿಳಿಸಿದರು. ಚಿನ್ನಕಾರ ಗ್ರಾಮ ಪಂಚಾಯಿತಿಯ ಧರ್ಮಪುರ ತಾಂಡದಲ್ಲಿ ಜಲಸಂಪನ್ಮೂಲ ಕಡಿಮೆ ಇದ್ದು , ಹೋದ ಬಾರಿ ಬಾಡಿಗೆ ತೆಗೆದುಕೊಳ್ಳಲಾಗಿದೆ. ಈ ಬಾರಿಯೂ ಕೂಡ ಬಾಡಿಗೆ ಬೋರ್ವೆಲ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತದೆ ಎಂದು ಗ್ರಾ.ಪಂ ಕಾರ್ಯದರ್ಶಿ ಮಾಹಿತಿ ನೀಡಿದರು.
ಗಾಜರಕೋಟ ಮತ್ತು ರಾಂಪುರದಲ್ಲಿ ನೀರಿನ ಸಮಸ್ಯೆ ಇದ್ದು, ರಾಂಪುರದಲ್ಲಿ ಎಂಟು ಬೋರ್ ವೆಲ್ ರಿಪೇರಿ ಆಗಿವೆ ಮತ್ತು ಹೊಸ ಪೈಪ್ ಲೈನ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಆದರೆ ಬಾಡಿಗೆ ಬೋರ್ವೆಲ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತದೆ ಎಂದು ಪಿಡಿಓ ತಿಳಿಸಿದರು.
ಜೈ ಗ್ರಾಮ ಗ್ರಾಮ ಪಂಚಾಯಿತಿಯ ಗೊರೆನೂರಿನಲ್ಲಿ ಬೋರ್ವೆಲ್ ಇದೆ 500 ಮೀಟರ್ ಪೈಪ್ಲೈನ್ ಅಳವಡಿಸಬೇಕಿದೆ ಮತ್ತು ಇಡ್ಲೂರಿನಲ್ಲಿ ಹೊಸ ಕೊಳವೆ ಬಾವಿ ಕೊರೆಸ ಬೇಕಿದೆ ಎಂದು ಪಿಡಿಓ ತಿಳಿಸಿದರು. ಪುಟಪಾಕ ಗ್ರಾಮ ಪಂಚಾಯಿತಿಯ ಮಲ್ಲಾಪುರದಲ್ಲಿ ಒಂದು ಬೋರಿಂಗ್ ಕಾರ್ಯನಿರ್ವಹಿಸುತ್ತಿಲ್ಲ ಅಲ್ಲಿ ಒಂದು ಮೋಟಾರ್ ಅಳವಡಿಸಬೇಕಿದೆ.
ಯಂಪಾಡ ಗ್ರಾಮ ಪಂಚಾಯಿತಿ ಹಾಗೂ ಕಾಕಲವಾರ, ಬುದೂರ ಕಾಳ ಬೆಳಗುಂದಿ, ಕಣೆಕಲ್, ನಂದೇಪಲ್ಲಿ, ಮಾದ್ವಾರ ಗ್ರಾಮ ಪಂಚಾಯಿತಿ ಮತ್ತು ಎಲೇರಿ ಜಿಬಿ ತಾಂಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಏಪ್ರಿಲ್ ನಲ್ಲಿ ಸಮಸ್ಯೆ ಉಲ್ಬಾಣಿಸುತ್ತದೆ. ಬಾಡಿಗೆ ಬೋರ್ವೆಲ್ ಮುಖಾಂತರ ನೀರು ಸರಬರಾಜು ಮಾಡುವಂತೆ ತಹಸೀಲ್ದಾರ್ ಅವರು ಪಿಡಿಓ ಅವರಿಗೆ ಸೂಚಿಸಿದರು.
ಗುರುಮಠಕಲ್ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜನರಿಂದ ಕುಡಿಯುವ ನೀರಿನ ಸಮಸ್ಯೆ & ದೂರುಗಳಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶೀಘ್ರವೇ ಸಮಸ್ಯೆಗೆ ಸ್ಪಂದಿಸಿ ಪರಿಹರಿಸಬೇಕು. ಮುಂಬರುವ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಪಿಡಿಓ ಅವರು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿರಿ ಎಂದು ತಹಸಿಲ್ದಾರ್ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ನರಸಿಂಹಸ್ವಾಮಿ, ಪುರಸಭೆ ಮುಖ್ಯಅಧಿಕಾರಿ ಶರಣಪ್ಪ ಮಡಿವಾಳ, ಪಶು ಇಲಾಖೆ ತಾಲೂಕು ಸಹಾಯಕ ನಿರ್ದೇಶಕರು ಶಶಿಕಿರಣ ಹಜಾರೆ, ತಾ.ಪಂ ಎಡಿ ರಾಮಚಂದ್ರ ಬಸೂದೆ, ವಿಷಯ ನಿರ್ವಾಹಕ ವಿದ್ಯಾಸಾಗರ ಕುಲಕರ್ಣಿ ಸೇರಿದಂತೆ ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
