ಜಿಲ್ಲಾಡಳಿತದಿಂದ ಮಹಾಯೋಗಿ ವೇಮನ ಜಯಂತಿ ಆಚರಣೆ | ರಾಜವಂಶದಲ್ಲಿ ಹುಟ್ಟಿದರೂ ಕೂಡ ಸುಖ ತ್ಯಜಿಸಿ, ಸಮಾಜ ಸುಧಾರಣೆ
ಯಾದಗಿರಿ: ವೇಮನರು ಕವಿಯ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಅಪರೂಪದ ಸಮಾಜ ಸುಧಾರಕ ಎಂದು ಉಪನ್ಯಾಸಕ ಡಾ.ಸಿದ್ಧರಾಜರೆಡ್ಡಿ ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವೇಮನರು ಜನ ಸಾಮಾನ್ಯರ ಕವಿಯಾಗಿದ್ದು ತಮ್ಮ ಜೀವಿತದ ಅವಧಿಯಲ್ಲಿ ಜಾತೀಯತೆ, ಅಂಧಶ್ರದ್ದೆ, ಮೇಲುಕೀಳುಗಳನ್ನು ತಮ್ಮ ಪದ್ಯಗಳ ಮೂಲಕ ಧಿಕ್ಕರಿಸಿದ ಅಪರೂಪದ ಸಮಾಜ ಸುಧಾರಕ. ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳುವರ್ ಅವರಂತೆ ತೆಲುಗಿನಲ್ಲಿ ಶ್ರೇಷ್ಠ ಮತ್ತು ಮಹಾಕವಿ ಎಂದರೆ ವೇಮನ ಮಹಾಯೋಗಿ ಎಂದು ತಿಳಿಸಿದರು.
ವೇಮನ ಮತ್ತು ಅವರ ಪದ್ಯಗಳ ಕುರಿತು ಮೊಟ್ಟಮೊದಲ ಬಾರಿಗೆ ಬೆಳಕು ಚೆಲ್ಲಿದ್ದು ಸಿ.ಪಿ.ಬ್ರೌನ್. ಅವರು ವೇಮನ ಪದ್ಯಗಳನ್ನು ತೆಲುಗಿನಿಂದ ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದಾರೆ. ವೇಮನರ ಪದ್ಯಗಳು ಭಾರತದಷ್ಟೆ ಅಲ್ಲದೆ ವಿಶ್ವದ ಅನೇಕ ದೇಶಗಳಲ್ಲಿ ಜನಪ್ರಿಯವಾಗಿದೆ ಎಂದು ತಿಳಿಸಿದರು.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ಜನಿಸಿದರು. ರಾಜಕುಮಾರನ ಮಗನಾಗಿದ್ದರೂ ವೇಮನರು ತಮ್ಮ ಜೀವಿತ ಅವಧಿಯಲ್ಲಿ ಸುಖಸಂಪತ್ತನ್ನು ತ್ಯಜಿಸಿ ಸಮಾಜ ಸೇವೆಗೆ ಧಾವಿಸಿದ ಮಹಾಪುರುಷರು.
ವೇಮನರು ತಮ್ಮ ಕಣ್ಣಿಗೆ ಕಂಡದ್ದನ್ನೆಲ್ಲಾ ಪದ್ಯಗಳನ್ನಾಗಿ ರಚಿಸಿ ಹಾಡುತ್ತಾ ಸಾಗಿ ಮಹಾ ದಾರ್ಶನಿಕರಾದರು. ಸಮಾಜದಲ್ಲಿನ ಅಂಕುಡೊಂಕುಗಳನ್ನು ಕಂಡು ಮರುಗುತ್ತಾ, ಅಲ್ಲಲ್ಲೇ ಮೊನಚು ಮಾತುಗಳಿಂದ ಅವುಗಳನ್ನು ತಿದ್ದುತ್ತಾ ತಮ್ಮ ಸಂದೇಶಗಳನ್ನು ಹೇಳುತ್ತಾ ನಿಂತಲ್ಲಿ ನಿಲ್ಲದೇ, ಪರ್ಯಾಟನೆ ಮಾಡುತ್ತಿದ್ದರು. ಇನ್ನು ತಮ್ಮ ಗುರುಗಳ ನೆನಪಿಗಾಗಿ ವಿಶ್ವದಾಭಿರಾಮ ಕೇಳು ವೇಮ ಎಂಬ ಅಂಕಿತದಲ್ಲೇ ಪದ್ಯರಚನೆ ಮಾಡಿದ ಮಹಾನ್ ಪುರುಷರು ಎಂದು ತಿಳಿಸಿದರು. ರಾಜವಂಶದಲ್ಲಿ ಹುಟ್ಟಿದರೂ ಕೂಡ ಸುಖವನ್ನು ತ್ಯಜಿಸಿ ಪದ್ಯಗಳ ಮೂಲಕ ಸಮಾಜ ಸುಧಾರಣೆ ಮಾಡಿದ್ದಾರೆ ಎಂದರು.
ಸಮಾರಂಭವನ್ನು ತಹಶಿಲ್ದಾರಾದ ಸುರೇಶ ಅಂಕಲಗಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ,ಸಮಾಜದ ಮುಖಂಡರಾದ ರಾಚನಗೌಡ ಮುದ್ನಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಭೀಮನಗೌಡ ಕ್ಯಾತ್ನಾಳ,ರೆಡ್ಡಿ ಸಮಾಜದ ಕೋಶಾಧ್ಯಕ್ಷ ಮಲ್ಲನಗೌಡ ಹಳಿಮನಿ ಕೌಳೂರ, ಆರ್.ಮಹಾದೇವಪ್ಪ ಅಬ್ಬೆತುಮಕೂರ, ಡಾ.ಶಿವಪುತ್ರರೆಡ್ಡಿ ಪಾಟೀಲ ಚಟ್ನಳ್ಳಿ, ಸಿದ್ರಾಮರೆಡ್ಡಿ ತಿಪ್ಪರೆಡ್ಡಿ, ಸಿದ್ರಾಮರೆಡ್ಡಿ ಶಿವರಾಯ ಯಲ್ಹೇರಿ, ಲಿಂಗಾರೆಡ್ಡಿ ಯಡ್ಡಳ್ಳಿ,ರುದ್ರಗೌಡ(ರವಿ) ಪಾಟೀಲ ಗುರಸುಣಿಗಿ, ಶರಣಗೌಡ ಯಡ್ಡಳ್ಳಿ, ಸೋಮನಾಥರೆಡ್ಡಿ ಯಲ್ಹೇರಿ, ಎ.ವಿಶ್ವನಾಥರೆಡ್ಡಿ,ರಾಜಶೇಖರ ಪಾಟೀಲ, ಅಶೋಕರೆಡ್ಡಿ ಹೊನಗೇರಾ ಸೇರಿದಂತೆ ಹಿರಿಯ ಗಣ್ಯರು ಉಪಸ್ಥಿತರಿದ್ದರು. ಗುರುಪ್ರಸಾದ ವೈದ್ಯ ನಿರೂಪಿಸಿದರು. ಶರಣಬಸವ ಯಾಳಗಿ ಪ್ರಾರ್ಥಿಸಿದರು.
