ಯಾದಗಿರಿ ಜಿಲ್ಲೆಯ ತಾಲ್ಲೂಕುವಾರು ಪ್ರಗತಿ ವರದಿ ಬಿಡುಗಡೆ ಮಾಡಿದ ಜಿಲ್ಲಾ ಚುನಾವಣಾಧಿಕಾರಿ
ಯಾದಗಿರಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿ ಬಿಎಲ್‍ಒ ಗಳ ಮೂಲಕ ಮನೆ-ಮನೆಗೆ ಭೇಟಿ ನೀಡಿ ಎಣಿಕೆ ನಮೂನೆ (Enumeration Form – EF) ವಿತರಿಸುವ ಕಾರ್ಯವು ಚುರುಕಿನಿಂದ ಸಾಗುತ್ತಿದೆ. ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ಲಭ್ಯವಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಶೇ. 97.08 ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ.
ಮನೆ-ಮನೆಗೆ ಗಣತಿ ನಮೂನೆ ನೀಡುವುದು ಹಾಗೂ ಡಿಜಿಟೈಸೇಶನ್ ಕಾರ್ಯವು ಕಳೆದ ಜೂನ್ 30 ರಿಂದ ಆರಂಭವಾಗಿದ್ದು, ಜುಲೈ 29 ರವರೆಗೆ ನಡೆಯಲಿದೆ. ಜೂನ್ 16 ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಟ್ಟು 10,53,236 ಮತದಾರರು ದಾಖಲಾಗಿದ್ದಾರೆ.
ಜಿಲ್ಲೆಯ ಒಟ್ಟು 10,53,236 (100%) ಮತದಾರರಿಗೆ ಎಣಿಕೆ ನಮೂನೆಗಳನ್ನು (EF) ಯಶಸ್ವಿಯಾಗಿ ವಿತರಿಸಲಾಗಿದ್ದು, ಈ ಪೈಕಿ 5,75,017 (54.60%) ನಮೂನೆಗಳನ್ನು ಈಗಾಗಲೇ ಡಿಜಿಟೈಸ್ ಮಾಡಲಾಗಿದೆ. ಉಳಿದಂತೆ 4,439 (0.42%) ನಮೂನೆಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಲಾಗಿದೆ.
ಮನೆ-ಮನೆ ಸಮೀಕ್ಷೆಯ ವೇಳೆ ಜಿಲ್ಲೆಯಲ್ಲಿ ಒಟ್ಟು 15,676 ASDDO ಮತದಾರರನ್ನು ಗುರುತಿಸಲಾಗಿದ್ದು, ಇದರಲ್ಲಿ ಮೃತ ಮತದಾರರು 5,438, ಶಾಶ್ವತವಾಗಿ ಸ್ಥಳಾಂತರಗೊಂಡವರು 7,060, ಈಗಾಗಲೇ ನೋಂದಾಯಿತರಾಗಿರುವವರು 2,824, ಗೈರು ಹಾಜರಾದವರು 284, ಇತರರು 70 ಸೇರಿದ್ದಾರೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಡಿಜಿಟೈಸೇಶನ್ ಕಾರ್ಯ ಪ್ರಗತಿಯಲ್ಲಿದ್ದು, ಜು.18 ರ ಸಂಜೆ 4 ಗಂಟೆ ವರದಿಯಂತೆ ಶಹಾಪುರ ತಾಲ್ಲೂಕು ಶೇ. 59.29 ರಷ್ಟು ಪ್ರಗತಿ ಸಾಧಿಸುವ ಮೂಲಕ ಮುಂಚೂಣಿಯಲ್ಲಿದೆ. ಶೋರಾಪೂರ ಶೇ. 50.75, ಯಾದಗಿರಿ ಶೇ. 48.02, ಗುರುಮಟಕಲ್ ಶೇ. 58.72, ವಡಗೇರಾ ಶೇ. 57.25, ಹುಣಸಗಿ ಶೇ. 57.63 ದಾಖಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 1134 ಪಾರ್ಟ್‍ಗಳಲ್ಲಿ ಈ ಮಹತ್ವದ ಪ್ರಕ್ರಿಯೆ ನಡೆಯುತ್ತಿದ್ದು, ನಿಗದಿತ ಅವಧಿಯೊಳಗೆ ಸಂಪೂರ್ಣ ಡಿಜಿಟೈಸೇಶನ್ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಚುನಾವಣಾ ಅಧಿಕಾರಿಗಳ ತಂಡ ಶ್ರಮಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
