ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡಲು ಒತ್ತಾಯ

ಯಾದಗಿರಿ: ಮಳೆ ಕೊರತೆಯಿಂದ ಬಿತ್ತಿದ ಬೆಳೆ ಒಣಗುತ್ತಿದ್ದು, ಸರ್ಕಾರ ಈ ಕೂಡಲೇ ಯಾದಗಿರಿ ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಣೆ ಮಾಡಿ ಪ್ರತಿ ಎಕರೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕೆಂದು ಭಾರತೀಯ ಜನತಾ ಪಕ್ಷದ ಮಾಜಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ಒಂದುವರೇ ತಿಂಗಳಿಂದ ಮಳೆ ಬರದೇ ರೈತರು ಕಂಗಾಲಾಗಿದ್ದಾರೆ. ಬೆಳೆಗಳು ಒಣಗುತ್ತಿವೆ. ಇಡಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಇದರಿಂದ ಜನ, ಜಾನುವಾರುಗಳು ಕಷ್ಟಕ್ಕೆ ಸಿಲುಕಿವೆ. ಹಾಗಾಗಿ ಒಣ ಬರಗಾಲವೆಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಹತ್ತಿ, ಹೆಸರು, ತೊಗರಿ, ಉದ್ದು, ಶೆಂಗಾ ಇತರೇ ಮುಂಗಾರು ಬೆಳೆ ಬಿತ್ತಿದ ರೈತರು ಉತ್ತಮ ಫಸಲು ಬಂದು ಮುಂದಿನ ಕೃಷಿ ಕಾಯಕಕ್ಕೆ ಅನುಕೂಲವಾಗುತ್ತದೆ ಎಂಬ ನಂಬಿಕೆ ಹುಸಿಯಾಗುತ್ತಿದೆ.ಈಗಾಗಲೇ ಸಾಲ, ಸೂಲ ಮಾಡಿಕೊಂಡ ರೈತರು ಚಿಂತೆಗೆ ಒಳಗಾಗಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಯಾದಗಿರಿ,ವಡಗೇರಾ ತಾಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಕುಟುಂಬಗಳಿಗೆ ತಲಾ 20 ಲಕ್ಷ ರೂ.ಪರಿಹಾರ ತಕ್ಷಣವೇ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಿಎಂ, ಡಿಸಿಎಂ ಸೇರಿದಂತೆ ಕೃಷಿ ಇಲಾಖೆ ಉನ್ನತ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ರೈತರ ಪರಸ್ಥಿತಿ ಕಣ್ಣಾರೇ ಕಂಡು ಪರಿಹಾರ ನೀಡಿದ್ದಲ್ಲಿ ಅನ್ನದಾತರು ಉಳಿಯುತ್ತಾರೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ಬರಗಾಲ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!