ನಮ್ಮ ಸರಕಾರವು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ರಾಜ್ಯ ಸರ್ಕಾರ ಘೋಷಿಸಿದೆ | 740 ಕೋಟಿ ವೆಚ್ಚದ ಅನುಭವ ಮಂಟಪ ಶೀಘ್ರ ಪೂರ್ಣ | ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿಕೆ
ಬೀದರ : ಬಸವಕಲ್ಯಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಐತಿಹಾಸಿಕ ಅನುಭವ ಮಂಟಪಕ್ಕೆ ಸೋಮವಾರ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. ಇದೇ ವೇಳೆ ಬಸವಾದಿ ಶರಣರು ಪ್ರತಿಪಾದಿಸಿದ ಇಷ್ಟಲಿಂಗವನ್ನು ತಮ್ಮ ಹಸ್ತದಲ್ಲಿಟ್ಟುಕೊಂಡು ಸುಮಾರು ಎರಡು ನಿಮಿಷಗಳ ಕಾಲ ಧ್ಯಾನ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗಜ್ಯೋತಿ ಬಸವೇಶ್ವರರ ತತ್ವ, ಆದರ್ಶ ಮತ್ತು ಸಂದೇಶಗಳು ವಿಶ್ವದಾದ್ಯಂತ ಪ್ರಚಾರವಾಗುತ್ತಿವೆ ನಮ್ಮ ಸರಕಾರವು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿದ್ದು, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತಿವೆ ಎಂದು ಹೇಳಿದರು. ಸುಮಾರು ರೂ. 740 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಿ ರಾಜ್ಯದ ಜನತೆಗೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಅವರು ಸಮಾಜದ ಎಲ್ಲ ವರ್ಗದ ಶ್ರಮಜೀವಿಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ನಾಂದಿ ಹಾಡಿದರು. ಸುಮಾರು 770 ಶರಣರನ್ನು ಒಳಗೊಂಡ ಅನುಭವ ಮಂಟಪದಲ್ಲಿ ಸಮಾಜದ ಅಂಕು ಡೊಂಕುಗಳನ್ನು ಚರ್ಚಿಸಿ, ಮೂಢನಂಬಿಕೆಗಳನ್ನು ತೊಡೆದುಹಾಕುವ ಕಾರ್ಯ ನಡೆಸಿದರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಸಾರಿದ ಬಸವಣ್ಣ, ಇಷ್ಟಲಿಂಗ ಶಿವಯೋಗ ಸಾಧನೆಯ ಮೂಲಕ ಮನುಷ್ಯನು ದೈವತ್ವವನ್ನು ಹೊಂದಬಹುದೆಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. ಮನಸ್ಸಿಗೆ ನೆಮ್ಮದಿ, ವ್ಯಕ್ತಿತ್ವ ವಿಕಾಸ ಹಾಗೂ ಪರಮಾತ್ಮನ ಅನುಭೂತಿಗೆ ಬಸವಾದಿ ಶರಣರು ನೀಡಿರುವ ಇಷ್ಟಲಿಂಗ ಶಿವಯೋಗ ಸಾಧನೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಶರಣಪ್ರಕಾಶ ಪಾಟೀಲ, ಸಂಸದ ಸಾಗರ ಖಂಡ್ರೆ, ಶಾಸಕರಾದ ರಹೀಂ ಖಾನ್, ಶರಣು ಸಲಗಾರ, ಡಾ.ಸಿದ್ದು ಪಾಟೀಲ್, ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನಪರಿಷತ್ ಸದಸ್ಯ ಬಸನಗೌಡ ಮಾಜಿ ಎಂಎಲ್ಸಿ ವಿಜಯ್ ಸಿಂಗ್, ಹಿರಿಯ ಐಎಎಸ್ ಅಧಿಕಾರಿಗಳಾದ ಎಲ್.ಕೆ. ಅತೀಕ್, ಶಾಲಿನಿ ರಜನೀಶ್, ಗೌರವ್ ಗುಪ್ತ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ. ಪಂ. ಸಿಇಓ ಡಾ. ಗಿರೀಶ್ ಬಡೋಲೆ, ಮಾಲಾ ಬಿ, ನಾರಾಯಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
