ನನಗೆ ಕಡಿಮೆ ಕೂಲಿ ಕೊಟ್ಟಿದ್ದೀರಿ, ಆದರೂ ನಾನು ದುಡಿಯುವುದು ನಿಲ್ಲಿಸಿಲ್ಲ | ಮಕ್ಕಳು ವಿದ್ಯಾವಂತರಾದರೆ ಸಮಾಜದಲ್ಲಿ ಗೌರವ | ಬೆಟ್ಟದಹಳ್ಳಿಯಲ್ಲಿ ಶಾಸಕ ಶರಣಗೌಡ ಕಂದಕೂರ ಹೇಳಿಕೆ
ಗುರುಮಠಕಲ್: ಮತಕ್ಷೇತ್ರದಲ್ಲಿ ಎಲ್ಲೆಡೆ ಸೋಲಾರ್ ಅಳವಡಿಸಿ ಬೆಳಕು ಆಗಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೇ ಇದು ಬೆಂಗಳೂರುನಲ್ಲಿರುವವರಿಗೆ ಹೊಟ್ಟೆಕಿಚ್ಚು ಬಿದ್ದಿದೆ. ಹಾಗಾಗಿ ಬಂದ್ ಮಾಡಿದ್ದಾರೆ ಎಂದು ಶಾಸಕ ಶರಣಗೌಡ ಕಂದಕೂರ ಜನರೆದುರು ಕಡ್ಡಿ ಮುರಿದಂತೆ ಹೇಳಿದರು. ನಮ್ಮ ತಾಂಡಾದಲ್ಲಿ ಇನ್ನೊಂದು ಸೋಲಾರ್ ವಿದ್ಯುತ್ ಕಂಬ ನೆಟ್ಟು ಬೆಳಕು ಹರಿಸಲು ಬೆಟ್ಟದಹಳ್ಳಿ ಜನರು ಮನವಿ ಮಾಡಿದ ವೇಳೆ ಶಾಸಕರು ಹೇಳಿದ್ದರಿಂದ ಜನ ತಬ್ಬಿಬ್ಬಾದ ಪ್ರಸಂಗ ನಡೆಯಿತು.
ಗುರುಮಠಕಲ್ ಕ್ಷೇತ್ರದ ಗೋಪಾಳಪುರ ಗ್ರಾಮದಲ್ಲಿ ಕೆಕೆಆರ್ಡಿಬಿ ವತಿಯಿಂದ ಶಾಲಾ ತರಗತಿ ಕೋಣೆ ನಿರ್ಮಾಣ, ಚಿನ್ನಾಕಾರ ಗ್ರಾಮದಲ್ಲಿ ಕೆಕೆಆರ್ಡಿಬಿ ವತಿಯಿಂದ ಅಂಗನವಾಡಿ ಕಟ್ಟಡ 2 ನಿರ್ಮಾಣಕ್ಕೆ ಅಡಿಗಲ್ಲು ಬೆಟ್ಡದಳ್ಳಿ ಗ್ರಾಮದಲ್ಲಿ 15 ಲಕ್ಷ ರೂ. ವೆಚ್ಛದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, 40 ಲಕ್ಷ ರೂ.ಗಳ ವೆಚ್ಚದಲ್ಲಿ ಸರ್ಕಾರಿ ಶಾಲೆಗೆ 2 ಕೋಣೆಗಳ ನಿರ್ಮಾಣ ಹಾಗೂ ಧರ್ಮಪುರ ಗ್ರಾಮದಲ್ಲಿ 2 ಕೋಣೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಬೆಟ್ಡದಳ್ಳಿಯಲ್ಲಿ ಗ್ರಾಮಸ್ಥರು ನಮಗೆ ಮೂರು ಬಾರಿ ಚುನಾವಣೆಯಲ್ಲಿ ಲೀಡ್ ಕೊಟ್ಟಿದ್ದೀರಿ. ಆದರೆ, ಕಳೆದ ಚುನಾವಣೆಯಲ್ಲಿ ನನ್ನ ಮೇಲೆ ಮುನಿಸಿಕೊಂಡಿರಿ. ಆದರೂ ಈ ಎತ್ತು ದುಡಿಯುವುದನ್ನು ನಿಲ್ಲಿಸಿಲ್ಲ. ಕ್ಷೇತ್ರದ ಅಭಿವೃದ್ಧಿಯೊಂದೆ ಪ್ರಮುಖ ಗುರಿಯಾಗಿ ಇಟ್ಟುಕೊಂಡು ನಾನು ಮುನ್ನೆಡೆಯುತ್ತಿದ್ದೇನೆ ಎಂದರು.
ಗೋಪಾಳಪುರ ಗ್ರಾಮದಲ್ಲಿ ಜನರ ಕುಂದು ಕೊರತೆ ಆಲಿಸಿದ ಶಾಸಕರು, ಪ್ರತಿ ವರ್ಷ ನಮಗೆ ಸರ್ಕಾರದಿಂದ ಬರುವ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಿಸಬೇಕಾದರೆ ಸ್ವಲ್ಪ ಸಮಯ ಹಿಡಿಯುತ್ತದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಗ್ರಾಮಕ್ಕೆ 10 ಲಕ್ಷ ರೂ.ಬಿಡುಗಡೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನವಾಬುರ್ಜ್-ಗೋಪಾಳಪುರ ರಸ್ತೆ ಸುಧಾರಣೆಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಅನುದಾನ ಬರಬೇಕಾದರೆ ಮೊದಲು ಟ್ರಸ್ಟ್ ಇರಬೇಕು. ಅಂದಾಗ ಮಾತ್ರ ಹಣ ಬಿಡುಗಡೆ ಮಾಡಿಸಬಹುದು ಎಂದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾದರೆ ನಮ್ಮ ಕ್ಷೇತ್ರದಲ್ಲಿ ಶಿಕ್ಷಕರ ಸಮಸ್ಯೆ ನೀಗಲಿದೆ.
2015-16ರಲ್ಲಿ ಕೆರೆಗಳ ಹೂಳೆತ್ತಲು ಬಂದಿದ್ದ ಸುಮಾರು 5 ಕೋಟಿ ರೂ.ಗಳ ಅಧಿಕಾರಿ, ಜನಪ್ರತಿನಿಧಿಗಳು ಅನಾಮತ್ತಾಗಿ ಎತ್ತಿ ಹಾಕಿದ ಕಾರಣ ಮತ್ತೆ ಸರ್ಕಾರದಿಂದ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ಚಿನ್ನಾಕಾರ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಸುಸಜ್ಜಿತವಾಗಿದ್ದು, ಇಡೀ ಕ್ಷೇತ್ತದಲ್ಲಿ ಇಂಥ ಕಟ್ಟಡವಿಲ್ಲ. ನಮ್ಮ ತಂದೆ ಶಾಸಕರಿದ್ದಾಗ ನಿರ್ಮಾಣವಾದ ಈ ಕಟ್ಟಡ ಉದ್ಘಾಟನೆಗೆ ಅನಿವಾರ್ಯವಾಗಿ ಅವರು ಬರಲು ಸಾದ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮದ ದೊಡ್ಡ ಬೆಟ್ಟಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಹಿಂದಿನ ಸಿಎಂ ಸಿದ್ದರಾಮಯ್ಯ 10 ಕೋಟಿ ರೂ.ಅನುದಾನ ನೀಡಿದ್ದರು. ಅದರಲ್ಲಿ ಮೂರು ಕೋಟಿ ಅನುದಾನ ಬಿಡುಗಡೆಯಾಗಿದ್ದು, ಒಂದೆರಡು ವಾರಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು.
ಕೆಕೆಆರ್ಡಿಬಿಯಿಂದ ಬರುವ ಅನುದಾನವನ್ನು ಪರಮೇಶಪಲ್ಲಿವರೆಗೂ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಬಹುದು ಆದರೆ, ಮುಂದಿನ ದಿನಗಳಲ್ಲಿ ಯಾರು ನಿರ್ವಹಣೆ ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಲು ಮುಂದಾದರೆ ಒಳ್ಳೆಯದು ಎಂದು ಸಲಹೆ ಮಾಡಿದರು.
ಗ್ರಾಪಂನಲ್ಲಿ ಪಿಡಿಒಗಳು ಹಳ್ಳಿಗಳಲ್ಲಿ ಇರುವ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಸಲು ಪ್ರಯತ್ನಿಸಬೇಕು. ಗ್ರಾಮದಲ್ಲಿ ಬೋರವೆಲ್ ಬೇಡಿಕೆ ಇದೆ. ಆದರೆ, ಇಲ್ಲಿಂದಲೇ ಬೆಳೆದು ಹೋದವರು ನಮಗೆ ಅನುದಾನವನ್ನೇ ಕೊಡಲಿಲ್ಲ ಎಂದರು. ಕೆಕೆಆರ್ಡಿಬಿಯಿಂದ ಅನುದಾನ ಬಿಡುಗಡೆಯಾಗಲಿದ್ದು ಗ್ರಾಮಸ್ಥರನ್ನು ಕರೆದು ನಿಮಗೆ ಅವಶ್ಯಕತೆ ಇರುವ ಕೆಲಸ ಮಾಡಿಕೊಡುವೆ ಎಂದು ಭರವಸೆ ನೀಡಿದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಶುಭಾಷಶ್ಚಂದ್ರ ಕಟಕಟಿ, ಶರಣಗೌಡ, ಜಯೇಂದ್ರ, ಸಿಡಿಪಿಓ ಶರಣಬಸವ,ಬಿಇಒ ವೀರಪ್ಪ ಕನ್ನಳ್ಳಿ, ಉಪ ತಹಸೀಲ್ದಾರ್ ಬಸವರಾಜ ಸಜ್ಜನ್, ಈಶ್ವರ ನಾಯಕ, ನಿರ್ಮಿತಿ ಕೇಂದ್ರದ ಕಿರಣ್ ಹೂಗಾರ, ಕಿಶನ್ ರಾಠೋಡ, ಬಾಲು ದಾಸರಿ, ಅಂಬಾದಾಸ ಜೀತ್ರಿ, ಸುರೇಶ್ ರಾಠೋಡ, ಪಿಡಿಓ ಅನುರಾಧಾ, ಶಿವು ಎಂ.ಟಿ.ಪಲ್ಲಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
