ಗುರುಮಠಕಲ್ ಮಾಜಿ ಶಾಸಕ ನಾಗನಗೌಡ ಕಂದಕೂರ ಅವರ 2 ನೇ ಪುಣ್ಯ ಸ್ಮರಣೆ | ಅಪಾರ ಸಂಖ್ಯೆಯ ಜನರು ಭಾಗಿ
ಗುರುಮಠಕಲ್: ಅಧಿಕಾರ ಶಾಶ್ವತವಲ್ಲ… ಜನರ ಪ್ರೀತಿ, ವಿಶ್ವಾಸ, ನಂಬಿಕೆ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವ ಪ್ರಸಂಗ ಬುಧವಾರ ಕಣ್ಣಿಗೆ ಕಂಡಿತು. ಆ ನಾಯಕನ ನೆನೆದು ಕೆಲ ಹಿರಿಯ ಅಭಿಮಾನಿಗಳ ಕಣ್ಣಂಚು ಒದ್ದೆಯಾಗಿತ್ತು.
ಮತಕ್ಷೇತ್ರದ ಮಾಜಿ ಶಾಸಕ, ಹಿರಿಯ ರಾಜಕೀಯ ಧುರೀಣ ದಿ.ನಾಗನಗೌಡ ಕಂದಕೂರ ಅವರ 2ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಸಾಗರವೇ ಸೇರಿದ್ದು ಇದಕ್ಕೆ ಸಾಕ್ಷಿ ಎನ್ನುವಂತಿತ್ತು.
ಮತಕ್ಷೇತ್ರದಲ್ಲಿ ದಶಕಗಳಿಂದ ತಮ್ಮದೇ ಆದ ಅಭಿಮಾನಿ ಕಾರ್ಯಕರ್ತರು, ಪಕ್ಷಾತೀತವಾಗಿ ಬಾಂಧವ್ಯ ಹೊಂದಿದ್ದ, ನಾಯಕರು ಸ್ಮಾರಕಕ್ಕೆ ಹೂಗುಚ್ಛೆ ಅರ್ಪಿಸಿ ನಮಿಸಲು ಸಾಲುಗಟ್ಟಿ ಅಭಿಮಾನಿಗಳು ನೆರೆದಿದ್ದರು. ಕಂದಕೂರ ಗ್ರಾಮದ ಅವರು ತೋಟದಲ್ಲಿ ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು.
ಬೆಳಿಗ್ಗೆ ಕಂದಕೂರ ಪರಿವಾರ ಸಮಾಧಿಗೆ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಆಗಿನಿಂದಲೇ ಅಭಿಮಾನಿಗಳು ಗ್ರಾಮೀಣ ಭಾಗ ಸೇರಿದಂತೆ ಜಿಲ್ಲೆ, ನೆರಿ ಜಿಲ್ಲೆಯ ನಾಗನಗೌಡ ಕಂದಕೂರ ಅವರ ಒಡನಾಡಿಗಳು ಆಗಮಿಸಿ, ಕಂದಕೂರ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ, ನಾಯಕನ ನೆನೆದರು.
ಜನರನ್ನು ನಿಯಂತ್ರಿಸಲು ಸ್ವಯಂಸೇವಕರು ಕೆಲಕಾಲ ಪರದಾಡುವಂತಾಯಿತು. ಕೆಲವು ಪ್ರಮುಖ ಮಠಾಧಿಪತಿಗಳು, ಅಪಾರ ಪ್ರಮಾಣದಲ್ಲಿ ತಾಯಂದಿರು ಸಹ ಆಗಮಿಸಿದ್ದರು. ಶಾಸಕ ಶರಣಗೌಡ ಕಂದಕೂರ, ಮಲ್ಲಿಕಾರ್ಜುನರೆಡ್ಡಿ ಕಂದಕೂರ ಸೇರಿದಂತೆ ಪ್ರಮುಖರು, ಕಂದಕೂರ ಕುಟುಂಬದ ಬಂಧುಗಳು, ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
