ಜ.31ರಂದು ಕಾರ್ಯಕ್ರಮ ಭವ್ಯ ಶೋಭಾಯಾತ್ರೆ ತಯಾರಿ | ಹಿಂದೂ ಮುಖಂಡರಿಂದ ಸುದ್ದಿಗೋಷ್ಠಿ
ಗುರುಮಠಕಲ್: ಹಿಂದೂ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ಸಮಾಜದ ಮುಂದಿದ್ದು, ಜಾತಿ–ಜಾತಿಗಳ ನಡುವೆ ವಿಭಜನೆಯಾಗದೆ ಎಲ್ಲ ಹಿಂದೂಗಳು ಒಗ್ಗಟ್ಟಾಗಬೇಕಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಇಡೀ ದೇಶದಾದ್ಯಂತ ಹಿಂದೂ ಸಮ್ಮೇಳನಗಳನ್ನು ಆಯೋಜಿಸಿ, ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಹಾಗೂ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ತಾಲ್ಲೂಕು ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷ ಪನ್ನಾಲಾಲ್ ಪಟೇಲ್ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಮಧ್ಯಾಹ್ನ 3 ಗಂಟೆಗೆ ನಗರೇಶ್ವರ ದೇವಸ್ಥಾನದಿಂದ ಹಿಂದೂ ಸಮ್ಮೇಳನದ ಶೋಭಾಯಾತ್ರೆ ಭವ್ಯವಾಗಿ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು, ವಾದ್ಯಗೋಷ್ಠಿಗಳೊಂದಿಗೆ ಭಾರತ ಮಾತೆಯ ಭಾವಚಿತ್ರ ಹಾಗೂ ಮಹಾಪುರುಷರ ಕಟೌಟುಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಶೋಭಾಯಾತ್ರೆಯಲ್ಲಿ ಮಠಾಧೀಶರು, ಗಣ್ಯರು, ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಲಿದ್ದು, ಸಾಯಂಕಾಲ 5 ಗಂಟೆಗೆ ರಾಮನಗರದಲ್ಲಿ ಶೋಭಾಯಾತ್ರೆ ಸಮಾಪ್ತಿಗೊಳ್ಳಲಿದೆ ಎಂದು ವಿವರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗಿರಿ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ ಗುರುಗಳು ವಹಿಸಲಿದ್ದು, ವಿಶೇಷ ಉಪನ್ಯಾಸಕ್ಕಾಗಿ ವಕ್ತಾರರಾಗಿ ಮಲ್ಲಿಕಾರ್ಜುನ ಬಾಳಿಕಾಯಿ ಆಗಮಿಸಲಿದ್ದಾರೆ. ವಿವಿಧ ಸಮಾಜ ಮುಖಂಡರು ಹಾಗೂ ಹಿಂದೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಮಿತಿ ಉಪಾಧ್ಯಕ್ಷ ಪಂಡರಿ ದೊಡ್ಲಾ ತಿಳಿಸಿದರು. ಸುಮಾರು 2-3 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಪ್ರಮುಖರಾದ ಬಸ್ಸಪ್ಪ ಸಂಜನೊಳ, ಸಂಚಾಲಕ ಶ್ರೀನಿವಾಸ ಯಾದವ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಮಠ, ಗುರುರಾಜ್ ಜೋಶಿ ಹಾಗೂ ಸಮಾಜ ಮುಖಂಡರಾದ ರಾಜ ರಮೇಶ್ ಗೌಡ, ಶಿವಾನಂದ ಬೂದಿ, ಕೆ. ದೇವದಾಸ, ಸತ್ಯನಾರಾಯಣ ತಿವಾರಿ, ಭೀಮಶಪ್ಪ ಗುಡಿಸೆ, ಮೋಹನ್ ಬುರಬುರೆ, ಅಶೋಕ್ ಶನಿವಾರಂ, ಕಿಶೋರ್ ಢಗೆ, ಪ್ರವೀಣ ಪಟೇಲ್ ಸೇರಿದಂತೆ ಹಲವರು ಇದ್ದರು.
