ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಬೀಳ್ಕೊಡುಗೆ, ವಿಶೇಷ ಉಪನ್ಯಾಸ | ಅನ್ನ ನೀಡುವ ಜಿಲ್ಲೆಯಲ್ಲಿ‌ ಹಸಿವೂ ಇದೆ – ಪ್ರೊ. ಹೆಚ್.ಡಿ.ಪ್ರಶಾಂತ್

ರಾಯಚೂರು: ಏಷ್ಯಾದಲ್ಲೇ ಅತ್ಯಂತ ದೊಡ್ಡ ಹತ್ತಿ ಮಾರುಕಟ್ಟೆ, ಕರ್ನಾಟಕದಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆ ಅಂತ ಕರೆಸಿಕೊಳ್ಳುವ ರಾಯಚೂರಲ್ಲಿ ಅಪೌಷ್ಠಿಕತೆ, ಬಾಲ್ಯ ವಿವಾಹ, ಬಾಲಕಾರ್ಮಿಕತೆ, ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಸೇರಿದಂತೆ ಕೆಲ ಜ್ವಲಂತ ಸಮಸ್ಯೆಗಳೂ ಇವೆ. ಅನ್ನ ಬೆಳೆಯುವ ಜಿಲ್ಲೆಯಲ್ಲೇ ಹಸಿವೂ ಇದೆ ಅನ್ನೋದು ಕೇಳೋಕೆ ವಿಚಿತ್ರ ಅನಿಸಿದರೂ ಸತ್ಯವಾದ ಹಾಗೂ ಖೇದಕರ ಸಂಗತಿ. ಸ್ವಾತಂತ್ರ್ಯ ಬಂದು ಸುವರ್ಣ ವರ್ಷಾಚರಣೆ ಮಾಡುತ್ತಿರುವ ಕಾಲದಲ್ಲಿ ಇನ್ನೂ ಯಾಕೆ ಹೀಗೆ ಅಂತ ಚಿಂತಿಸತೊಡಗಿದಾಗ ಇಲ್ಲಿನ ರಾಜಕೀಯ ಬದ್ಧತೆಯ ಕೊರತೆಯೇ ಅಸಮಾನತೆ ಇನ್ನೂ ಹಾಗೇ ಉಳಿಯಲು ಹಾಗೂ ಅಭಿವೃದ್ಧಿ ವೇಗವನ್ನು ಪಡೆಯದೇ ಇರಲು ಮುಖ್ಯ ಕಾರಣ ಅನ್ನೋದು ಗೊತ್ತಾಗುತ್ತೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಹೆಚ್.ಡಿ.ಪ್ರಶಾಂತ್ ಅನಿಸಿಕೆ ವ್ಯಕ್ತಪಡಿಸಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ (ರಾಯಚೂರು) ಅರ್ಥಶಾಸ್ತ್ರ ಅಧ್ಯಯನ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರಾದೇಶಿಕ ಅಸಮಾನತೆಯನ್ನು ತೊಡೆದುಹಾಕುವ ಸಣ್ಣ-ದೊಡ್ಡ ಪ್ರಯತ್ನಗಳು ಮೊದಲಿನಿಂದಲೂ ನಡೆಯುತ್ತಲೇ ಬಂದಿವೆ. ಸರ್ಕಾರಕ್ಕೆ ಕೂಡ ಆಗಾಗ ಇಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದ ಅಂಕಿ-ಅಂಶಗಳು, ವರದಿಗಳು ಸಲ್ಲಿಕೆಯಾಗುತ್ತಿರುತ್ತವೆ. ಇವುಗಳನ್ನು ಆಧರಿಸಿ ಸರ್ಕಾರ ಕೂಡ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಹಾಗೂ ಅನುದಾನಗಳನ್ನು ಘೋಷಿಸುವ ಮೂಲಕ ಬದಲಾವಣೆಗಳನ್ನು ತರುವ ವಿಶೇಷ ಪ್ರಯತ್ನಗಳನ್ನೂ ಆಗಾಗ ಮಾಡುತ್ತಿರುತ್ತದೆ. ಇಷ್ಟಾದರೂ ಕೂಡ ಇಲ್ಲಿನ ಅನೇಕ ಸಮಸ್ಯೆಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಜನಸಾಮಾನ್ಯರೂ ಎಚ್ಚೆತ್ತುಕೊಂಡು ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು-ಅಧಿಕಾರಿಗಳ ಮುಂದೆ ಪ್ರಶ್ನೆ ಮಾಡದೇ ಇರುವ ಪ್ರವೃತ್ತಿ ಕೂಡ ನಾವು ಹಿಂದುಳಿಯಲು ಕಾರಣ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, ಸರ್ಕಾರಗಳಿಗೆ ಯೋಜನೆಗಳನ್ನು ರೂಪಿಸಲು, ಬಜೆಟ್ ಹಂಚಿಕೆ ಮಾಡಲು ಅಂಕಿ-ಅಂಶಗಳು ಬಹಳಾ ಮುಖ್ಯ. ಅರ್ಥಶಾಸ್ತ್ರ ವಿಷಯ ಅಧ್ಯಯನ ಮಾಡಿರುವವರು ಈ ಅಂಕಿ-ಅಂಶಗಳನ್ನು ತಯಾರಿಸುವಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ ಜೊತೆಗೆ ಆರ್ಥಿಕತೆ ಬಗ್ಗೆ ವಿಶೇಷ ಜ್ಞಾನವನ್ನು ಹೊಂದಿರುತ್ತಾರೆ. ಹಾಗಾಗಿ ಈ ವಿಷಯವನ್ನು ಅಧ್ಯಯನ ಮಾಡಿರುವವರಿಗೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಬೇಕಾದ ಸೇವೆಗಳನ್ನು ನೀಡುವ ವಿಶೇಷ ಅವಕಾಶವಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಮತ್ತು ರಾಷ್ಟ್ರದ ಸಂಪನ್ಮೂಲ ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಲಸಚಿವರಾದ (ಆಡಳಿತ) ಡಾ.ಎ.ಚನ್ನಪ್ಪ ಅವರು, ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಜನತೆಯ ತಲಾದಾಯವು ಗಮನಾರ್ಹ ಪ್ರಮಾಣದಲ್ಲಿ ಕಮ್ಮಿ ಇರುವುದು ಅಂಕಿ-ಅಂಶಗಳಿಂದ ತಿಳಿದು ಬರುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಶಿಕ್ಷಣ ಕೂಡ ತುಂಬಾ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅರಿವಿನ ಮಟ್ಟ ಹೆಚ್ಚಾದಂತೆಲ್ಲಾ ಅಭಿವೃದ್ಧಿಯೂ ವೇಗ ಪಡೆಯುತ್ತದೆ. ಹಾಗಾಗಿ ಗುಣಮಟ್ಟದ ಶಿಕ್ಷಣದ ಕಡೆ ನಮ್ಮ-ನಿಮ್ಮ ಒಲವು ಹೆಚ್ಚಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಕುಲಸಚಿವರು (ಆಡಳಿತ) ಹಾಗೂ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಕೆ.ವೆಂಕಟೇಶ್ ಅವರು ಮಾತನಾಡಿ, ಹಂಗು ಮತ್ತು ದಾಕ್ಷಿಣ್ಯ ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ಸಂಗತಿಗಳಲ್ಲ. ಜಾತಿ, ಧರ್ಮ, ಲಿಂಗ, ಆರ್ಥಿಕ ಸೇರಿದಂತೆ ಯಾವುದೇ ಅಸಮಾನತೆಗಳಿಲ್ಲದೇ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯ ಹರಿವಿನಲ್ಲಿ ಭಾಗವಹಿಸುವಂತಾದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಅಸಮಾನತೆಯನ್ನು ನೀಗಿಸುವ ನಿಟ್ಟಿನಲ್ಲಿ ಯುವಜನತೆ ಸಾಗಬೇಕು ಎಂದು ಹೇಳಿದರು.

ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿಭಾಗದ ಸಂಯೋಜಕ ಡಾ. ಶಂಕರಾನಂದ.ಜಿ ಅತಿಥಿ ಪರಿಚಯ ಮಾಡಿಕೊಟ್ಟರು. ವಿಭಾಗದ ಉಪನ್ಯಾಸಕ ಡಾ. ನಾಗರಾಜ.ಕೆ, ಶಿವರಾಜ ಹರವಿ, ದುರುಗಪ್ಪ ಗಣೇಕಲ್, ರಾಮಚಂದ್ರಪ್ಪ.ಕೆ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯುಜಿಸಿ ಎನ್‌ಇಟಿ ಪಾಸಾಗಿರುವ ವಿಭಾಗದ ಭೀಮಮ್ಮ ಕಲ್ಮನಿ, ಕೆಸೆಟ್ ಪಾಸಾಗಿರುವ ರಮೇಶ್ ಹಾಗೂ ವೀರೇಶ್ ನಾಯಕ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಶಿವರಾಜ್ ಸ್ವಾಗತಿಸಿದರು, ಮಲ್ಲಿಕಾರ್ಜುನ್ ವಂದಿಸಿದರು ಮತ್ತು ಮಲ್ಲಮ್ಮ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!