ವಿವಿಧ ಘಟನೆ ಕುರಿತು ಬಿಜೆಪಿ ಮಹಿಳಾ ಮೋರ್ಚಾ ಖಂಡನೆ | ಕ್ರಮಕ್ಕೆ ಒತ್ತಾಯಿಸಿದ ಕಾರ್ಯಕರ್ತೆಯರು
ಯಾದಗಿರಿ: ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಹಲ್ಲೆ ಮಾಡಿದ್ದನ್ನು ಖಂಡಿಸಿ ಪೊಲೀಸರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಒಬ್ಬ ಜೀವಂತ ಪ್ರತಿನಿಧಿಗೆ ಶ್ರದ್ಧಾಂಜಲಿ ಪೋಸ್ಟ್ ನ್ನು ಹಾಕಿರುವವನ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ವೀಣಾ ಮೋದಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ನಗರದಲ್ಲಿ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ನಾಗರೀಕ ಸಮಾಜವೇ ತಲೆತಗ್ಗಿಸುವಂತೆ ,ಮಹಿಳೆಯರಿಗೆ ಪವಿತ್ರ ಸ್ಥಾನ ನೀಡುವ ಈ ಸಮಾಜದಲ್ಲಿ ರಾಜಕೀಯ ದ್ವೇಷಕ್ಕಾಗಿ ಒಬ್ಬ ಮಹಿಳೆ ಎಂದು ನೋಡದೆ, ಸಾರ್ವಜನಿಕವಾಗಿ ದೌರ್ಜನ್ಯ ಎಸಗಲು ಪೊಲೀಸರಿಗೆ ಕುಮ್ಮಕ್ಕು ನೀಡಿದ್ದು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿ, ಖಂಡಿಸಿದರು.
ಕಾರ್ಪೊರೇಟರ್ ಸುವರ್ಣ ಅವರು ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಮೇಲೆ ಪೊಲೀಸರು ತಮ್ಮ ವರ್ಷವನ್ನು ಪ್ರದರ್ಶಿಸಿರುವುದು ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತರು ಹಾಗೂ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಹಾಗೂ ಸುಳ್ಯದ ಶಾಸಕಿ ಭಾಗಿರತಿ ಮುರುಳ್ಳ ರವರನ್ನು ತೇಜೋವಧೆ ಮಾಡುವ ಪೋಸ್ಟ್ ನ್ನು ಹಾಕಿರುತ್ತಾನೆ. ಈ ರೀತಿಯ ಶ್ರದ್ಧಾಂಜಲಿ ಪೋಸ್ಟ್ ಹಾಕಿರುವುದನ್ನು ನೋಡಿದರೆ, ಈತನ ಮನಸ್ಥಿತಿ ಏನೂ ಎಂದು ಅರ್ಥ ಆಗುತ್ತದೆ ,ದಲಿತ ಶಾಸಕಿಗೆ ಈ ಅಪಮಾನ ಮಾಡಿರುವುದು ತೀವ್ರ ಖಂಡನೀಯ, ಈತನ ಮೇಲೆ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ ನಾಯಕ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ನೇಹ ರಸಳಕರ್, ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷೆ ಭೀಮಬಾಯಿ ಶೆಂಡಿಗಿ, ಶಕುಂತಲಾ ಜಿ ಸೇರಿದಂತೆ ಇತರರು ಇದ್ದರು.
