ಹೆಡಗಿಮದ್ರಾ ಜಾತ್ರಾಯ ನಿಮಿತ್ತ ಪುರಾಣ ಪ್ರವಚನ ಕಾರ್ಯಕ್ರಮ ಚಾಲನೆ
ಯಾದಗಿರಿ: ಪಾಲಕರು ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ಕೊಡಿಸಿದರೂ ಸಂಸ್ಕಾರ ನೀಡುವುದನ್ನು ಮರೆಯಕೂಡದು ಎಂದು ರಾಚನಗೌಡ ಮುದ್ದಾಳ ತಿಳಿಸಿದರು.
ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಶ್ರೀಶಾಂತ ಶಿವಯೋಗಿ ಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಆವರಣ ದಲ್ಲಿ ಹಮ್ಮಿಕೊಳ್ಳಲಾಗಿದ್ದ ನವಲಗುಂದ ನಾಗಲಿಂಗ ಅಜ್ಜರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಆಧುನಿಕರಣದ ಇಂದಿನ ಜಗತ್ತಿನಲ್ಲಿ ಮನುಷ್ಯ ಎಲ್ಲವನ್ನೂ ಆವಿಷ್ಕಾರ ಮಾಡಿದ್ದಾನೆ. ಆದರೆ ಸಂಸ್ಕಾರ ರಹಿತನಾಗಿ ಬದುಕುತ್ತಿದ್ದಾನೆ.
ಗ್ರಾಮೀಣ ಭಾಗದಲ್ಲಿ ಜಾತ್ರೆ, ಉತ್ಸವಗಳನ್ನು ಆಚರಿಸುವುದು ಮನದ ಮೈಲಿಗೆ ತೊಳೆದು, ಅಂತರಂಗದಲ್ಲಿ ಜ್ಞಾನದ ಜ್ಯೋತಿ ಹೆಚ್ಚಿಸಲು. ಪ್ರತಿವರ್ಷದಂತೆ ಈ ವರ್ಷ ಸಹ ಜಾತ್ರೆ ಅದ್ದೂರಿಯಾಗಿ ನಡೆಯಲು ಭಕ್ತರ ಸಹಕಾರ ಅಗತ್ಯವಾಗಿದೆ ಎಂದರು.
ಗ್ರಾಮದ ಗಿರೀಶ್ ಮಾಲಿ ಪಾಟೀಲ್ ಮಾತನಾಡಿ ಮಠದ ಪೀಠಾಪತಿಗಳ ನೇತೃತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ಶ್ರೀಮಠ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಹೇಳಿದರು. ಸಾನಿಧ್ಯವನ್ನು ಪೀಠಾಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮಿಗಳು ವಹಿಸಿದ್ದರು.
ಪ್ರವಚನಕಾರ ರೇವಣಸಿದ್ದಯ್ಯಾಶಾಸೀಗಳು, ಮಹಾಂತಯ್ಯ ಸ್ವಾಮಿ ಹಿರೇಮಠ,ಪ್ರಮುಖರಾದ ನಾಗರಡ್ಡಿಗೌಡ ಪಾಟೀಲ್, ಗಾವಯಿ ಕಲ್ಯಾಣಕುಮಾರ್ ಹಾರಕೋಡ, ತಬಲಾ ನಾಗರಾಜ ಶಹಾಪುರ ಸೇರಿದಂತೆ. ಊರಿನ ಮುಖಂಡರು, ಮಹಿಳೆಯರು, ಮಠದ ಶಾಲೆಯ ವಿದ್ಯಾರ್ಥಿಗಳು ಸುತ್ತಮುತ್ತ ಗ್ರಾಮಸ್ಥರು ಇದ್ದರು.
