ಕಾಲ್ತುಳಿತ ಘಟನೆ | ಮೃತ ಶಿವಲಿಂಗನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ
ಯಾದಗಿರಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ್ತಕ್ಕೆ ಬಲಿಯಾದ ತಾಲೂಕಿನ ಹೊನಗೇರಾದ ಶಿವಲಿಂಗನ ಕುಟುಂಬಕ್ಕೆ ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು 25 ಲಕ್ಷ ರೂ.ಗಳ ಚೆಕ್ ವಿತರಿಸಿದರು.

ಶಿವಲಿಂಗನ ತಂದೆ ಚಂದಪ್ಪ, ತಾಯಿ ಲಕ್ಷ್ಮಿ, ಅಣ್ಣ ಹೊನ್ನಪ್ಪ ಅವರನ್ನು ಸಚಿವರು ಮಾತಾಡಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಮಗನನ್ನು ತಂದು ಕೊಡಲು ಯಾರಿಂದಲೂ ಸಾಧ್ಯವಿಲ್ಲ. ಕಾರಣ ಇನ್ನೊಬ್ಬ ಮಗ ಹೊನ್ನಪ್ಪನಲ್ಲಿಯೇ ಶಿವಲಿಂಗನನ್ನು ಕಾಣುವ ಮೂಲಕ ನೆಮ್ಮದಿ ಜೀವನ ನಡೆಸಿರಿ. ಹಣದ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.
ನಡೆಯಬಾರದ್ದು ನಡೆದಿದೆ. ವಿಧಿಯಾಟ, ಎದೆಗುಂದದೇ ಬದುಕು ಸಾಗಿಸಿ, ನಿಮ್ಮ ಇನ್ನೊಬ್ಬ ಮಗನಿಗೆ ಇಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರಿ ಕೊಡಿಸುವ ಭರವಸೆ ನೀಡಿದರು.
ಶಾಸಕ ಶರಣಗೌಡ ಕಂದಕೂರು ಮತನಾಡಿ, ಸರ್ಕಾರದ ಈ ಪರಿಹಾದ ಹಣ ಪೊಲಾಗಿಸದೇ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದರು.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನುರು, ಡಿಸಿ ಡಾ.ಸುಶೀಲಾ, ಎಡಿಸಿ ಶರಣಬಸಪ್ಪ ಕೊಟಪ್ಪಗೋಳ, ಎಸಿ ಡಾ.ಹಂಪಣ್ಣ ಸಜ್ಜನ್ ಸೇರಿದಂತೆ ಇತರರಿದ್ದರು.
ಎಷ್ಟು ಜನರು ರಾಜೀನಾಮೇ ನೀಡಿದ್ದಾರೇ? : ಕಾಲ್ತುಳಿದ ಘಟನೆ ನಡೆದಿದ್ದು ವಿಷಾಧಕರ. ಸರ್ಕಾರ ತನ್ನ ವೈಫಲ್ಯತೆಯನ್ನು ಒಪ್ಪಿಕೊಂಡಿದೆ. ಹೀಗಾಗಿ ಯಾರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೇ ಇಂತಹ ಘಟನೆಗಳು ನಡೆದಾಗ ಯಾರು,ಯಾರು ರಾಜೀನಾಮೆ ನೀಡಿದ್ದಾರೆ, ಕುಂಭಮೇಳದಲ್ಲಿ ಜನರು ಮೃತಪಟ್ಟಾಗ ಎಷ್ಟು ಜನರು ರಾಜೀನಾಮೆ ನೀಡಿದ್ದರು ಎಂದು ಪ್ರಶ್ನಿಸಿದ ಸಚಿವರು, ಕೆಲವರು ರಾಜಕೀಯ ಮಾಡಿ ಬೇಳೆ ಬೆಯಿಸಿಕೊಳ್ಳಲು ಮುಂದಾಗುತ್ತಾರೆಂದು ಹೇಳಿದರು.
ಜೂ.14 ರಂದು ಯಾದಗಿರಿಗೆ ಸಿಎಂ : ಈಗಾಗಲೇ ನಿಗದಿಯಾದಂತೆಯೇ ಜೂನ್ 14 ರಂದು ನಗರಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆಂದು ಸಚಿವ ದರ್ಶನಾಪುರ ಹೇಳಿದರು.
ಕೊನೆಗಳಿಗೆಯಲ್ಲಿ ಕಾರ್ಯಕ್ರಮ ಏನಾಗುತ್ತದೆ ಎಂದು ಹೇಳಲು ಆಗದು. ಜೂ.9 ರಂದು ನಿಗದಿಯಾಗಿದ್ದ ರಾಯಚೂರು ಕಾರ್ಯಕ್ರಮ ರದ್ದಾಗಿದೆ. ಇಲ್ಲಿ ನಾವು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಬಂಜಾರ ಭವನದ ಮುಖಂಡರು ಬಂದು ಭೇಟಿ ಮಾಡಲಿ, ಸಿಎಂ ಅವರಿಂದ ಅದನ್ನು ಉದ್ಘಾಟಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದು ಸಚಿವರು ಹೇಳಿದರು.
