ಶಹಾಪುರ ತಾಲೂಕಿನ ಗೋಗಿ.ಕೆ ಗ್ರಾಮದಲ್ಲಿ ಅಗ್ನಿವೀರ ಯೋಧ ಮಹೇಶ ಅವರಿಗೆ ಸನ್ಮಾನ | ಭೀಮರೆಡ್ಡಿ ಮಂಟೋಳಿ ಅಭಿಮತ | ಗ್ರಾಮಸ್ಥರಿಂದ ಸಂಭ್ರಮ
ಯಾದಗಿರಿ: ಗಡಿ ಕಾಯುವುದು ಮಾತ್ರವಲ್ಲದೆ, ದೇಶದ ಸಾರ್ವಭೌಮತೆ, ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ತಮ್ಮ ಪ್ರಾಣವನ್ನೇ ಪಣ್ಣಕ್ಕಿಡುವ ಸೈನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ವಿಎಸ್ಎಸ್ಎನ್ ನಿರ್ದೇಶಕ ಭೀಮರೆಡ್ಡಿ ಮಂಟೋಳಿ ಅಭಿಪ್ರಾಯಪಟ್ಟರು.
ಶಹಾಪೂರ ತಾಲೂಕಿನ ಗೋಗಿ.ಕೆ ಗ್ರಾಮದಲ್ಲಿ ಅಗ್ನಿವೀರ ಯೋಧ ಮಹೇಶ ಯಾದವ ಅವರಿಗೆ ಸನ್ಮಾನಿಸಿ ಮಾತನಾಡಿದರು. ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅತ್ಯಂತ ದೊಡ್ಡದು ಹಾಗೂ ಅಮೋಘವಾಗಿದೆ. ಪ್ರತಿಕೂಲ ಹವಾಮಾನ ಮತ್ತು ಕಠಿಣ ಸವಾಲುಗಳನ್ನು ಎದುರಿಸಿ ಗಡಿಗಳನ್ನು ಕಾಯುವ ಮೂಲಕ ದೇಶದೊಳಗೆ ಶಾಂತಿ ನೆಲೆಸುವಂತೆ ಮಾಡುತ್ತಾರೆ.
ದೇಶದ ಸುರಕ್ಷತೆಗಾಗಿ ತಮ್ಮ ವೈಯಕ್ತಿಕ ಜೀವನ, ಕುಟುಂಬಗಳನ್ನು ತ್ಯಾಗ ಮಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸದಾ ಸಿದ್ಧರಿರುತ್ತಾರೆ. ದೇಶದ ಆಂತರಿಕ ಭದ್ರತೆಗೆ ಧಕ್ಕೆ ಬರುವಾಗ ಮತ್ತು ಗಡಿ ಪ್ರದೇಶಗಳಲ್ಲಿ ಉಗ್ರರ ಚಟುವಟಿಕೆಗಳನ್ನು ತಡೆಯುವಲ್ಲಿ ಸೈನಿಕರ ಪಾತ್ರ ಪ್ರಮುಖವಾಗಿರುತ್ತದೆ. ಯುದ್ಧದ ಸಂದರ್ಭಗಳಲ್ಲಿ ಮಾತ್ರಲ್ಲದೆ, ಪ್ರವಾಹ, ಭೂಕಂಪ ಮುಂತಾದ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ಜನಸಾಮಾನ್ಯರನ್ನು ರಕ್ಷಿಸುತ್ತಾರೆ ಎಂದರು.
ಭಾರತ ಮಾತೆಯ ರಕ್ಷಣೆಯಲ್ಲಿ ಸಗರನಾಡಿನ ಗೋಗಿ.ಕೆ ಗ್ರಾಮದ ಹೆಮ್ಮೆಯ ಪುತ್ರ ಶಿವಾನಂದ ಯಾದವ ಅವರು ಆಯ್ಕೆಯಾಗಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ಈಗಾಗಲೇ ತರಬೇತಿ ಪಡೆದ ಅವರು ದೇಶ ರಕ್ಷಣೆಗೆ ತೆರಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಯೋಧನ ತಂದೆ ಶಿವಾನಂದ ಯಾದವ, ಭೀಮು ಯಾದವ ಲಾಡ್ಲಾಪುರ, ಪ್ರಕಾಶ ಯಾದವ, ಹಣಮಂತ ಜೆರಬಂಡಿ, ದುರ್ಗಪ್ಪ ಯಾದವ ಸೇರಿದಂತೆ ಮುಂತಾದವರಿದ್ದರು.
