ಯಾದಗಿರಿ: ಒಳ ಮೀಸಲಾತಿಯ ಅವೈಜ್ಞಾನಿಕ ಹಂಚಿಕೆಯ ಮೂಲಕ ಬಂಜಾರಾ ಸಮಾಜಕ್ಕೆ ಅನ್ಯಾಯ ಎಸಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೂನ್ 30ರ ಬೆಳಗ್ಗೆ 11.00 ಗಂಟೆಗೆ ಯಾದಗಿರಿ ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಂಜಾರಾ ಸಮಾಜದಿಂದ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ,ಹಾಗೂ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಹೂವಿನ ಹಡಗಲಿ ಶಾಸಕ ಕೃಷ್ಣಾ ನಾಯಕ್,ಚಿಂಚೋಳಿ ಶಾಸಕ ಅವಿನಾಶ ಜಾಧವ, ಮಾಜಿ ಸಂಸದ ಉಮೇಶ ಜಾಧವ, ಸುರುಪುರ ಮತಕ್ಷೇತ್ರದ ಮಾಜಿ ಸಚಿವರು ನರಸಿಂಹ ನಾಯಕ(ರಾಜು ಗೌಡ್ರು) ಶಹಾಪುರ ಮತಕ್ಷೇತ್ರದ ಅಮೀನರೆಡ್ಡಿ ಯಾಳಗಿ, ಯಾದಗಿರಿ ಮತಕ್ಷೇತ್ರದ ಡಾ ಶರಣಭೂಪಾಲರೆಡ್ಡಿ, ರಾಚಣ್ಣಗೌಡ ಮುದ್ನಾಳ, ಮಹೇಶಗೌಡ ಮುದ್ನಾಳ, ಗುರುಮಠಕಲ್ ಮತಕ್ಷೇತ್ರದ ಕು. ಲಲಿತಾ ಅನಪುರ್ ಅವರು ಹಾಗೂ ಜಿಲ್ಲೆಯ ಬಂಜಾರಾ ಸಮಾಜದ ಮುಖಂಡರು ಸೇರಿದಂತೆ ಪಕ್ಷದ ಮುಖಂಡರು, ಸಮಾಜದ ಗಣ್ಯರು ಆಗಮಿಸುವರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಮಾಜದ ವಿವಿಧ ಜಾತಿ-ಜನಾಂಗಗಳ ನಡುವೆ ಭಿನ್ನಾಭಿಪ್ರಾಯ ಮತ್ತು ಸಂಘರ್ಷ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಒಳ ಮೀಸಲಾತಿಯ ಹೆಸರಿನಲ್ಲಿ ಬಂಜಾರಾ ಸಮಾಜಕ್ಕೆ ತೀವ್ರ ಅನ್ಯಾಯವಾಗಿದ್ದು, ಸಮಾಜದ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ ಎಂದಿದ್ದಾರೆ.
ರಾಜ್ಯ ಸರ್ಕಾರವು ಒಳ ಮೀಸಲಾತಿ ಹಂಚಿಕೆಯಲ್ಲಿ ವೈಜ್ಞಾನಿಕ ಹಾಗೂ ನ್ಯಾಯಸಮ್ಮತ ಮಾನದಂಡಗಳನ್ನು ಅನುಸರಿಸದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದರಿಂದ ಬಂಜಾರಾ ಸಮುದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಶಿಕ್ಷಣ ಮತ್ತು ಉದ್ಯೋಗಳಲ್ಲಿ ಅನ್ಯಾಯವಾಗುತ್ತಿದೆ. ನಾನು ಒಳ ಮೀಸಲಾತಿಯ ವರ್ಗೀಕರಣವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಹಿಂದೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟಿದ್ದೆ. ಸಂಬಂಧಪಟ್ಟ ಎಲ್ಲರಿಗೂ ತಿಳಿಸಿದ್ದೇನೆ. ಇದ್ಯಾವುದನ್ನೂ ಕಿವಿಗೆ ಹಾಕಿಕೊಂಡಿಲ್ಲ. ಬಂಜಾರಾ ಸಮಾಜವಲ್ಲದೇ ಭೋವಿ, ಕೊರಮ, ಕೊರಚ ಸಮಾಜಗಳಿಗೂ ಅನ್ಯಾಯ ಮಾಡಲಾಗಿದೆ. ಇದರಿಂದ ಸಮಾಜದಲ್ಲಿ ವ್ಯಾಪಕ ಅಸಮಾಧಾನ ಉಂಟಾಗಿದ್ದು, ಸರ್ಕಾರದ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಜೂನ್ 30ರಂದು ಯಾದಗಿರಿಯಲ್ಲಿ ನಡೆಯಲಿರುವ ಬೃಹತ್ ಜನ ಜಾಗೃತಿ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂಜಾರಾ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಹಾಗೂ ಸಮುದಾಯದ ಸದಸ್ಯರು ಭಾಗವಹಿಸಲಿದ್ದಾರೆ. ಸಮಾಜದ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟವನ್ನು ಯಶಸ್ವಿಗೊಳಿಸಲು ವಿದ್ಯಾರ್ಥಿಗಳು, ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕರಾದ ಪ್ರಭು ಚವ್ಹಾಣ ಮನವಿ ಮಾಡಿದ್ದಾರೆ.
