ಯಾದಗಿರಿಧ್ವನಿ.ಕಾಮ್ ಫಾಲೋಆಪ್ | ವರದಿಗೆ ಪುರಸಭೆ ಸ್ಪಂದನೆ
ಗುರುಮಠಕಲ್: ಕೈಮಗ್ಗ ಅಭಿವೃದ್ಧಿ ನಿಗಮದ ಸ್ಥಳ ಒತ್ತುವರಿಗೆ ಪ್ರಭಾವಿಯ ಪ್ರಚೋದನೆ ಶೀರ್ಷಿಕೆ ಅಡಿಯಲ್ಲಿ ನವೆಂಬರ್ 22 ರಂದು ಯಾದಗಿರಿ ಧ್ವನಿ.ಕಾಮ್ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ನಿಗಮದ ಸ್ಥಳದ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಯಾದಗಿರಿಧ್ವನಿಯೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನೇಕಾರರಿಗೆ ನೀಡಲಾಗಿರುವ ವಸತಿ ಬಡವಣೆಯನ್ನು ಪುರಸಭೆಗೆ ಹಸ್ತಾಂತರಿಸಲಾಗಿದೆ. ಆದರೆ, ನಿಗಮದಿಂದ ಫಲಾನುಭವಿಗಳಿಗೆ ಎಷ್ಟು ನಿವೇಶನ ನೀಡಲಾಗಿದೆ? ಎಷ್ಟು ಜನ ಫಲಾನುಭವಿಗಳಿದ್ದಾರೆ ?ಎಷ್ಟು ಅಳತೆಯ ನಿವೇಶನವನ್ನು ನೀಡಲಾಗಿದೆ ಎನ್ನುವುದರ ಕುರಿತು ಮಾಹಿತಿ ಪಡೆಯಲು ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ನಿಗಮದಿಂದ ಅಲಾಟ್ ಮಾಡಿರುವ ವಸತಿ ನಿಲಯಗಳನ್ನು ಕೆಲವೊಬ್ಬರು ಪುನರ್ ನಿರ್ಮಾಣ ಮಾಡಿಕೊಳ್ಳುತ್ತಿದ್ದು, 25 ವರ್ಷಗಳ ಬಳಿಕ ಫಲಾನುಭವಿ ತಮಗೆ ಅನುಕೂಲವಾಗುವಂತೆ ಮನೆ ಅಥವಾ ಸಣ್ಣ ವ್ಯಾಪಾರ ಉದ್ದೇಶಕ್ಕಾಗಿ ಇತರರಿಗೆ ತೊಂದರೆಯಾಗದಂತೆ ನಿರ್ಮಾಣ ಮಾಡಿಕೊಳ್ಳಬಹುದು ಎಂದು ನಿಗಮದ ಅಧಿಕಾರಿಗಳ ಪತ್ರದ ಆಧಾರದ ಹಿನ್ನೆಲೆ, ಸೇಲ್ ಡೀಡ್ ನಲ್ಲಿ ವಸತಿ/ವಾಣಿಜ್ಯ ನಮೂದು ಆಗಿರುವುದನ್ನು ಪರಿಗಣಿಸಿ, ಪುರಸಭೆಯಿಂದ ನಿರ್ಮಾಣಕ್ಕೆ ಪರವಾನಿಗೆ ನೀಡಲಾಗುತ್ತಿದೆ ಎಂದರು.
ನಿಗಮದ ಸ್ಥಳ ಸರ್ಕಾರಿ ಸ್ಥಳವಾಗಿದ್ದು, ನೇಕಾರರಿಗೆ ಮೀಸಲಾಗಿರುವ ಸ್ಥಳ ಬಿಟ್ಟು ಅಕ್ಕ ಪಕ್ಕದ ಸ್ಥಳವನ್ನು ಅತಿಕ್ರಮಿ ಸುತ್ತಿರುವುದು ಕಂಡು ಬಂದಿದೆ.

ಈ ಬಗ್ಗೆ ಶೀಘ್ರವೇ ಪುರಸಭೆ ಅಧಿಕಾರಿಗಳು ಕ್ರಮ ವಹಿಸುವ ಅಗತ್ಯವಿದೆ. ಜನಪ್ರತಿನಿಧಿಗಳು ಸಹ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮಕ್ಕೆ ಮುಂದಾಗಬೇಕಿದೆ.
ಅತಿಕ್ರಮಣ ತಡೆಯಲು ಬೇಕಿದೆ ದಾಖಲೆ..! : ಸುಮಾರು 4-5 ವರ್ಷದ ಹಿಂದೆಯಷ್ಟೇ ಕೈಮಗ್ಗ ನಿಗಮದ ವಸತಿ ನಿಲಯಗಳು ಫಲಾನುಭವಿಗಳಿಗೆ ಹೆಸರಿಗೆ ನೋಂದಣಿಯಾಗಿದೆ. ಇದಾದ ಬಳಿಕ ಪುರಸಭೆ ಸುಪರ್ದಿಗೆ ಒಳಪಟ್ಟಿದ್ದು, 100 ಫಲಾನುಭವಿಗಳಿಗೆ 25*20 ಅಳತೆಯ ನಿರ್ಮಾಣಗೊಂಡ ವಸತಿ ಸಮುಚ್ಚಯವನ್ನೇ ನಿಗಮ ಹಸ್ತಾಂತರಿಸಿದೆ. ಪುರಸಭೆ ಅಧಿಕಾರಿಗಳು ನಿಗಮಕ್ಕೆ ಪತ್ರ ಬರೆದು ಮಾಹಿತಿ ಪಡೆಯುವ ಮಾತುಗಳನ್ನಾಡಿದ್ದಾರೆ.
