ಜಿಲ್ಲಾ ಕವಾಯತ ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ
ಬಾಗಲಕೋಟೆ: ಮನಸ್ಸಿಗೆ ಉಲ್ಲಾಸ ತರುವ ಹಾಗೂ ಸ್ಪೂರ್ತಿ ದಾಯಕವಾದ ಕ್ರೀಡಾ ಚಟುವಟಿಕೆಗಳು ಬದುಕಿಗೆ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ನವನಗರದ ಜಿಲ್ಲಾ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ ವಾರ್ಷಿಕ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸ್ ಆಗಿರಬಹುದು, ಸಾಮಾನ್ಯ ವ್ಯಕ್ತಿಗಳಾಗಿರಬಹುದು ಕ್ರೀಡೆಗಳಲ್ಲಿ ತೊಡಗಿಕೊಂಡಾಗ ಮಾತ್ರ ನಮಗೆ ನಾವೆ ಕಂಡುಕೊಳ್ಳುತ್ತೀವಿ. ಅದೇ ನಮಗೆ ಸಿಗುವ ಉತ್ತಮ ಉಡುಗೊರೆ. ಆಟದ ಹವ್ಯಾಸ ಜೀವನದಲ್ಲಿ ಉಲ್ಲಾಸ ನೀಡುತ್ತದೆ ಎಂದರು.
ಕ್ರೀಡೆಗಳಲ್ಲಿ ಪರಿಪೂರ್ಣವಾಗಿ ತೊಡಗಿಕೊಳ್ಳಲು ಆಗದಿದ್ದರೂ ನಮಗೆ ಹೊಂದಿಕೊಳ್ಳುವ ಕ್ರೀಡೆಗಳಲ್ಲಿ ತೊಡಗಿಕೊಂಡಾಗ ಮಾತ್ರ ವ್ಯಯಕ್ತಿಕ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇತರರಿಗೆ ಸ್ಪೂರ್ತಿ ನೀಡುತ್ತದೆ ಎಂದರು.
ನಮ್ಮೆಲ್ಲ ಕ್ರಿಯೆಗಳು, ಕಾರ್ಯಚಟುವಟಿಕೆಗಳು ಬೇರಯವರನ್ನು ಉದ್ದೇಶಿಸಿದ್ದಾಗಿರುತ್ತೆ, ನಮಗೆ ನಾವೇ ಸ್ಪೂರ್ತಿ ಹೊಂದಲು ಶಕ್ತಿ ತುಂಬಿಕೊಳ್ಳಲು ಇಂತಹ ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರೀಡಾಕೂಟ ಆಯೋಜಿಸುವ ಪರಂಪರೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಆರೋಗ್ಯಕರ ಜೀವನಕ್ಕೆ ಕ್ರೀಡೆಗಳು ಸಹಕಾರಿಯಾಗಲಿವೆ.
ನಿರಂತರ ಒತ್ತಡಗಳ ಮದ್ಯ ಇಂತಹ ಕ್ರೀಡೆಗಳು ಮನಸ್ಸಿಗೆ ನೆಮ್ಮದಿ ಹಾಗೂ ಉಲ್ಲಾಸ ನೀಡುತ್ತವೆ. ಹಾಗಾಗಿ ಅಧಿಕಾರಿಗಳು ತಮ್ಮ ಒತ್ತಡದ ಮದ್ಯೆಯು ಕ್ರೀಡೆಗಳಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಗಳಿಗೆ ಚಾಲನೆ ನೀಡಿದರು.