ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಶಾಸಕರ ಕಚೇರಿ ಮುಂದೆ ತಮಟೆ ಚಳವಳಿ |ವಿಧಾನಸಭೆಯಲ್ಲಿ ಧ್ವನಿ ಎತ್ತಲು ಮನವಿ ಸಲ್ಲಿಕೆ
ಯಾದಗಿರಿ: ಒಳ ಮೀಸಲಾತಿ ಜಾರಿ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳ ಮೀಸಲಾತಿ ಜಾರಿ ಮಾಡದೆ ಕಾಲಹಹರಣದ ರಾಜಕೀಯ ಮಾಡುತ್ತಿರುವುದನ್ನು ವಿರೋಧಿಸಿ ಮಾದಿಗ ಮತ್ತು ಮಾದಿಗ ಉಪ ಜಾತಿಗಳ ಸಂಘಟನೆ ಒಕ್ಕೂಟದಿಂದ ಶಾಸಕರ ಕಚೇರಿ ಎದುರು ಘೋಷಣೆಗಳು ಕೂಗಿ ಒಳ ಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಒಕ್ಕೂಟದ ಅಧ್ಯಕ್ಷ ದೇವೇಂದ್ರನಾಥ ನಾದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರ ಜನ ಸಂಪರ್ಕ ಕಚೇರಿ ಎದುರು ಜಮಾಯಿಸಿದ ನೂರಾರು ಜನರು, ತಮಗೆ ನ್ಯಾಯ ದೊರಕಿಸಲು ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.
ಅ.1ರಂದು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು. ತೀರ್ಪು ಬಂದು ನಾಲ್ಕು ತಿಂಗಳಾದರೂ ಕರ್ನಾಟಕದ ಸರ್ಕಾರ ಅಮಗತಿ ಯಲ್ಲಿ ಸಾಗಿದೆ . ಕಾಚಾರಕ್ಕೆ ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ.
2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು ಆದರೆ, 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ, ಆಯೋಗಕ್ಕೆ, ಬೇಕಾದ ಕಛೇರಿ ಸಿಬ್ಬಂದಿ ಹಣಕಾಸಿನ ನೆರವು ಕೊಡದೆ ಕಾಲಾಹರಣ ಮಾಡಲಾಗುತ್ತಿದೆ ಎಂದರು.
ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ. ಸರ್ಕಾರದ ಮುಂದೆ ನ್ಯಾ.ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ವರದಿ ಇದೆ, 2011ರ ಜನಗಣತಿಯ ಅಂಕಿ ಅಂಶಗಳ ಆಧಾರದಲ್ಲಿ ವರ್ಗೀಕರಣ ಮಾಡಿದೆ. ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಅದೇ ಕೆಲಸ ಕೊಡಲಾಗಿದೆ ಎಂದು ವಿಳಂಬ ಧೋರಣೆಯನ್ನು ಖಂಡಿಸಿದರು.
ಸರ್ಕಾರದ ನಿಧಾನಗತಿಯ ನಿರ್ಲಕ್ಷದ ಧೋರಣೆ ನೋಡಿದರೆ ಇವರಿಗೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಒಳಮೀಸಲಾತಿ ಜಾರಿ ಆಗುವ ವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು ಆದರೆ, ಈ ಭರವಸೆ ಜಾರಿಯಾಗಿಲ್ಲ ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲೆ ಇವೆ ಎಂದರು.
ಹರಿಯಾಣದ ಸರ್ಕಾರ ತೀರ್ಪ ಬಂದ ಮೊದಲ ವಾರದಲೇ ಒಳಮೀಸಲಾತಿಯನ್ನು ಜಾರಿ ಮಾಡಿದೆ. ಆದರೆ ಕರ್ನಾಟಕ ಸರ್ಕಾರ ಬದ್ಧತೆ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದ ಹಸಿ ಸುಳ್ಳು ಜನರ ವಿಶ್ವಾಸ ಕಳೆಯುವಂತೆ ಮಾಡಿದೆ ಎಂದರು.
ಹಣಮಂತ ಇಟಗಿ, ಸ್ವಾಮಿ ದೇವ ದಾಸನಕೇರಿ, ಕಾಶಪ್ಪ ಹೆಗ್ಗಣಗೇರಾ, ಲಿಂಗಪ್ಪ ವಡನಳ್ಳಿ, ಚಂದ್ರಶೇಖರ, ಶಿವರಾಜ್ ದಾಸನಕೇರಿ ಸೇರಿದಂತೆ ಸಮಾಜ, ಸಂಘಟನೆಗಳ ನೂರಾರು ಮುಖಂಡರು, ಯುವಕರು ಪಾಲ್ಗೊಂಡಿದ್ದರು.