ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಸುಕ್ಷೇತ್ರ ಹಾಲಗೇರಾ ಯಲ್ಲಮ್ಮದೇವಿ ಭವ್ಯ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷದ ಮಧ್ಯೆ ಸಡಗರ ಸಂಭ್ರಮದಿಂದ ಇತ್ತೀಚೆಗೆ ಜರುಗಿತು.
ದಿನವಿಡೀ ಸುಡು ಬಿಸಿಲಿನಲ್ಲಿಯೂ ಭಕ್ತ ಸಮೂಹ ಬಸ್ಸು, ಕಾರು, ಜೀಪು ಮತ್ತು ಆಟೋಗಳಲ್ಲಿ ತಂಡೋಪ ತಂಡವಾಗಿ ಹಾಲಗೇರಾ ಗ್ರಾಮಕ್ಕೆ ಧಾವಿಸಿ ಬರುತ್ತಿದ್ದರು.
ಇಳಿಹೊತ್ತು. ಸೂರ್ಯ ಮುಳುಗುವ ಸಂದರ್ಭದಲ್ಲಿ ದೇವಸ್ಥಾನ ದ ಆವರಣದಲ್ಲಿ ಭಕ್ತರು ರಥೋತ್ಸವದ ಉತ್ಸುಕದಲ್ಲಿದ್ದರು. ಗ್ರಾಮದ ಸಂಪ್ರದಾಯದಂತೆ ಡೊಳ್ಳು ಭಾಜಾ ಭಜಂತ್ರಿಯೊಂ ದಿಗೆ ಎಲ್ಲಾ ಸಮುದಾಯದವರು ಶ್ರೀ ಯಲ್ಲಮಾಂಬೆ ಮಾತಾಕೀ ಜೈ ಎಂಬ ಮುಗಿಲು ಮುಟ್ಟವ ಜಯಘೋಷ ಮಾಡುತ್ತಾ ಭಕ್ತವೃಂದದೊಂದಿಗೆ ರಥವನ್ನು ಎಳೆದು ಸಂಭ್ರಮಿಸಿದರು.
ನೆರೆದ ಭಕ್ತ ಸಮೂಹ ಉತ್ತುತ್ತಿ, ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು, ಭಕ್ತಿಯಿಂದ ಕೈ ಜೋಡಿಸಿ, ನಮಿಸಿ, ಇಷ್ಟಾರ್ಥ ಗಳನ್ನು ಈಡೇರಿಸುವಂತೆ ಆರಾಧ್ಯದೈವದಲ್ಲಿ ಬೇಡಿಕೊಂಡರು.
ಬೆಳಗ್ಗೆಯಿಂದ ಅಸಂಖ್ಯಾತ ಭಕ್ತರು ಹಾಲಗೇರಾ ಗ್ರಾಮಕ್ಕೆ ಆಗಮಿಸಿ ಶ್ರೀ ಯಲ್ಲಮ್ಮದೇವಿಯ ದರ್ಶನಾಶೀರ್ವಾದ ಪಡೆದು ಕೃತಾರ್ಥರಾದರು. ಹಲಗೆ, ಬಾಜಾಭಜಂತ್ರಿ, ಡೊಳ್ಳು ಮುಂತಾದ ಮಂಗಲವಾದ್ಯಗಳ ಸದ್ದು, ಭಕ್ತರ ಸಂಭ್ರಮ, ಇಡಿ ಹಾಲಗೇರಾ ಗ್ರಾಮವನ್ನು ಭಕ್ತಿಯ ಬೀಡನ್ನಾಗಿಸಿತ್ತು.
ತೇರಿನ ಉತ್ಸವ ಮುಗಿಯುತ್ತಲೇ ಆಗಮಿಸಿದ ಭಕ್ತರ ದಂಡು ತಮ್ಮ ಉಪವಾಸ ವೃತವನ್ನು ಮುಗಿಸಿ ಪ್ರಸಾದವನ್ನು ಸ್ವೀಕರಿಸಿ ದರು. ಅನೇಕ ಭಕ್ತರು ಜಾತ್ರೆಯಲ್ಲಿನ ಅಂಗಡಿಗಳಿಗೆ ಖರೀದಿ ಗಾಗಿ ಮುಗಿಬಿದ್ದರು. ಫಳಾರ ಮತ್ತು ಬೆಂಡು ಬತಾಸ್ಗಳನ್ನು ಕೊಳ್ಳುವವರ ಭರಾಟೆಯಂತೂ ಹೇಳತೀರದಾಗಿತ್ತು. ಚಿಕ್ಕ-ಚಿಕ್ಕ ಮಕ್ಕಳು ತಮಗೆ ಅಕ್ಕರೆ ಎನಿಸಿದ ಕೊಳಲು, ಪೀಪಿ, ಮುಂತಾದ ಆಟಿಕೆ ಸಾಮಾನುಗಳನ್ನು ಕೊಂಡು ಸಂಭ್ರಮಿಸಿದರು.
