ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅಧ್ಯಕ್ಷತೆಯಲ್ಲಿ ಸಭೆ | ವಾರ್ಷಿಕ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚನೆ

ಯಾದಗಿರಿ: ಮಾರ್ಚ್ 1 ರಿಂದ 20ರ ವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯು ನಕಲುಮುಕ್ತ, ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಹಾಯಕ ಆಯುಕ್ತರಾದ  ಹಂಪಣ್ಣ ಸಜ್ಜನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಪರೀಕ್ಷೆ ಸಂದರ್ಭದಲ್ಲಿ ನಕಲು ದಂತಹ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆವಹಿಸಬೇಕು. ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಸಲು ಸಂಬಂಧಿಸಿದ ಅಧಿಕಾರಿಗಳು ಸಕಲ ಕ್ರಮಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು.

ಯಾದಗಿರಿ ಜಿಲ್ಲೆಯಲ್ಲಿ ಈ ಪರೀಕ್ಷೆಗಾಗಿ ಒಟ್ಟು 19 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು,ಈ ಪರೀಕ್ಷೆ ಕೇಂದ್ರ ಗಳಿಗೆ ಒಟ್ಟು 100ಪದವಿ ಪೂರ್ವ ಕಾಲೇಜುಗಳಲ್ಲಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಜೋಡಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 11369 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅರ್ಹರಾದ ಎಲ್ಲ ವಿದ್ಯಾರ್ಥಿಗಳ ಪ್ರವೇಶ ಪತ್ರ (Admission Ticket) ಗಳನ್ನು ಆನ್ಲೈನ್ ಮೂಲಕ ಎಲ್ಲ ಕಾಲೇಜುಗಳಿಗೆ ವಿತರಿಸಲಾಗಿದೆ. ಪರೀಕ್ಷೆ ಕೇಂದ್ರ ದ ಸಂಪೂರ್ಣ ಜವಾಬ್ದಾರಿಯು ಮುಖ್ಯ ಅಧೀಕ್ಷಕರದಾಗಿದ್ದು, ಈಗಾಗಲೇ ನೇಮಿಸಿದ ಅಧೀಕ್ಷಕರು ನಿಯಮಾವಳಿಗಳಂತೆ ಪರೀಕ್ಷೆ ನಡೆಸಲು ಸಕಲ‌ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಆಸನ,ಇತ್ಯಾದಿ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳಬೇಕು.ಅಭ್ಯರ್ಥಿಗಳಿಗೆ ಆಸನ ವ್ಯವಸ್ಥೆಯನ್ನು ಕೊಠಡಿಯಿಂದ ಹೊರಗೆ ಅಥವಾ ಕಾರಿಡಾರ್ ನಲ್ಲಿ ಅಥವಾ ನೆಲದ ಮೇಲೆ ಕುಳಿತು ಪರೀಕ್ಷೆಗಳನ್ನು ಬರೆಯಿಸ ಕೂಡದು ಎಂದು ಅವರು ಸೂಚಿಸಿದರು.

ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲು 200 ಮೀ.ಪ್ರದೇಶದಲ್ಲಿ ನಿಷೇಧಾಜ್ಞೆ ಇರಲಿದೆ. ಪರೀಕ್ಷೆ ಕಾರ್ಯಗಳಿಗೆ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರ ಕೇಂದ್ರದಲ್ಲಿ ಉಪಸ್ಥಿತರಿರಬೇಕು.ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು.ಅನ್ಯ ವ್ಯಕ್ತಿಗಳು ಕೇಂದ್ರದಲ್ಲಿ ಕಂಡು ಬಂದಲ್ಲಿ ಮುಖ್ಯ ಅಧೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದರು.

ಈ ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷಾರ್ಥಿಗಳು ಎಲೆಕ್ಟ್ರಾನಿಕ್ ವಸ್ತುಗಳು ಮೋಬೈಲ್, ಪೆನ್ ಡ್ರೈವ್ ಗಳು,ಇಯರ್ ಫೋನ್ ಗಳು, ಮೈಕ್ರೋಫೋನ್, ಬ್ಲೂಟೂಥ್ ಸಾಧನಗಳು,ಕೈಗಡಿಯಾರ ಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.

ಪರೀಕ್ಷೆ ಕೇಂದ್ರಗಳ ಸುತ್ತಲೂ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಬೇಕು. ಕೊಠಡಿ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಕೇಂದ್ರದ ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ವ್ಯವಸ್ಥೆ, ವ್ಯತ್ಯಯವಿಲ್ಲದ ನಿರಂತರ ವಿದ್ಯುತ್ ವ್ಯವಸ್ಥೆ ಹಾಗೂ ವೆಬ್ ಕಾಸ್ಟಿಂಗ್ ಅಳವಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲಾ ಕೇಂದ್ರಗಳ ಸಿಸಿಟಿವಿ ವೀಕ್ಷಿಸಲು ವೆಬ್ ಕಾಸ್ಟಿಂಗ ವ್ಯವಸ್ಥೆಯನ್ನು ಯಾದಗಿರಿ ಜಿಲ್ಲಾ ಪಂಚಾಯತ್ನ ವಿ. ಸಿ ಹಾಲ್ನಲ್ಲಿ ಕೈಗೊಂಡು, ನೇಮಿಸಿದ ವೀಕ್ಷಕರು ಪರೀಕ್ಷಾ ದಿನದಂದು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಜೆಸ್ಕಾಂ ಅಧಿಕಾರಿ ಗಳು ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು.

ಪರೀಕ್ಷೆ ಕೇಂದ್ರಗಳ ಮುಖ್ಯ ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು , ವಿಶೇಷ ಜಾಗೃತ ದಳದ ಸದಸ್ಯರು ಹಾಗೂ ಇತರೆ ಪರೀಕ್ಷಾ ಸಿಬ್ಬಂದಿಗಳು ಪರೀಕ್ಷೆಯ ಸ್ಥಾಯಿ ಸೂಚನೆಗಳಂತೆ ಕಾರ್ಯನಿರ್ವಹಿಸಬೇಕು.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಾಗಲಿ, ಸಿಬ್ಬಂದಿಗಳಾಗಲಿ ಮೊಬೈಲ್ ಫೋನುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೊಠಡಿಗಳ ಹೊರಗೆ ಅಲ್ಪ ದೂರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಗೌಪ್ಯ ಸಾಮಗ್ರಿಗಳನ್ನು ನಿಯಮಾವಳಿಗಳಂತೆ ನಿರ್ವಹಣೆ ಮಾಡಬೇಕು.

ಪರೀಕ್ಷೆ ವೇಳಾಪಟ್ಟಿಯಂತೆ  ಗೌಪ್ಯ ಸಾಮಗ್ರಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ತಲುಪಿಸಲು ವಿಶೇಷ ಪ್ರಶ್ನೆ ಪತ್ರಿಕೆ ಮಾರ್ಗಾ ಧಿಕಾರಿಗಳ ತಂಡವನ್ನು ರಚಿಸಿ ಮಾನ್ಯ ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ.

ಪರೀಕ್ಷೆ ಕೇಂದ್ರಗಳಿಗೆ ಸುರಕ್ಷತೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ , ವಿಶೇಷವಾಗಿ ಸುರಪುರ್ ನಗರದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕೋರಲಾಗಿದೆ ಎಂದು ಅವರು ತಿಳಿಸಿದರು.

ಕೊಠಡಿ ಮೇಲ್ವಿಚಾರಕರನ್ನು ಕಡ್ಡಾಯವಾಗಿ ಅನುದಾನಿತ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ, ಪ್ರೌಢಶಾಲಾ ಶಿಕ್ಷಕರು, ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು. ಪರೀಕ್ಷಾ ಕಾರ್ಯಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಪದವಿಪೂರ್ವ) ಚೆನ್ನಬಸಪ್ಪ ಕುಳಿಗೇರಿ ಸ್ವಾಗತಿಸಿ ಪರೀಕ್ಷೆ ಕುರಿತು ವಿವರಿಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರಾಂಶುಪಾಲರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!