ಸುಮಾರು 1 ಗಂಟೆ ಸುರಿದ ಮಳೆ | ಬಿಸಿಲಿನಿಂದ ತತ್ತರಿಸಿದ ಜನ ಜಾನುವಾರುಗಳಲ್ಲಿ ಕೊಂಚ ನೆಮ್ಮದಿ | ಕೃಷಿಕರಲ್ಲಿ ಭತ್ತ ಹಾಳಾಗುವ ಭೀತಿ
ಗುರುಮಠಕಲ್: ಯಾದಗಿರಿ ಜಿಲ್ಲೆಯ ಗಡಿ ತಾಲೂಕು ಗುರುಮಠಕಲ್ ನಲ್ಲಿ ಸುಮಾರು ಅರ್ಧ ಗಂಟೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿರುವುದು ಕೆಂಡದಂತೆ ಬಿಸಿಲಿನಿಂದ ತತ್ತರಿಸಿದ ದಿನಗಳಲ್ಲಿ ಕೊಂಚ ತಂಪೆರೆದಿದೆ.
ಮೇ ತಿಂಗಳಲ್ಲಿ ಬಿಸಿಲಿನಿಂದ ಜನ ಜಾನುವಾರುಗಳಿಗೆ ಹೈರಾಣಾಗಿದ್ದರು. ಮನೆಯಿಂದ ಹೊರಗೆ ಕಾಲಿಟ್ಟರೆ ಕೆಂಡದಂತ ಅನುಭವ. ಇನ್ನೂ ಜಾನುವಾರುಗಳಿಗೆ ನೀರು, ಮೇವು ಸಿಗುವುದು ಕಷ್ಟವಾಗಿತ್ತು.
ಅಂತೂ ಮಳೆರಾಯ ಕೃಪೆ ತೋರಿದ್ದು, ಗುರುಮಠಕಲ್ ಪಟ್ಟಣ ಸೇರಿ ಸುತ್ತಲಿನ ಇಮ್ಲಾಪೂರ, ಚಪೆಟ್ಲಾ ಇತರೆ ಕಡೆ ಹಾಗೂ ನೆರೆಯ ಸೇಡಂ ತಾಲೂಕಿನ ಮುಧೋಳ, ಮೋತಕಪಲ್ಲಿ, ಚಂದಾಪುರ, ವೆಂಕಟಾಪುರ ವ್ಯಾಪ್ತಿಯಲ್ಲಿ ಮಳೆಯಾಗಿ ರುವ ಕುರಿತು ಮಾಹಿತಿ ಲಭ್ಯವಾಗಿದೆ. ಮಳೆ ಕೃಷಿ ಚಟುವಟಿಕೆಗೆ ಪೂರಕವಾಗಿದೆ ಆದರೆ, ಭತ್ತ ಬೆಳೆದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ಸುರಿದ ಆಲಿಕಲ್ಲು ಮಳೆ: ಅರ್ಧ ಗಂಟೆಗೂ ಹೆಚ್ಚು ಕಾಲ ಗುರುಮಠಕಲ್ ಪಟ್ಟಣದಲ್ಲಿ ಆಲಿಕಲ್ಲು ಮಳೆ ಸುರಿದಿರುವುದು. ತಂಪು ವಾತಾವರಣ ನಿರ್ಮಾಣವಾಗಿದೆ. 1.45ರ ವರೆಗೂ ಮಳೆ ಮುಂದುವರಿದಿದೆ.ಮೋಡ ಕವಿದ ವಾತಾವರಣವಿದೆ.
ಭಾರಿ ಗುಡುಗು, ಮಿಂಚು: ಮಧ್ಯಾಹ್ನ 12:45ರ ವೇಳೆಗೆ ಭಾರಿ ಗುಡುಗು, ಮಿಂಚು ಆರ್ಭಟ ಎದೆ ಝಲ್ ಎನ್ನುವಂತಿತ್ತು. ಸುತ್ತಮುತ್ತ ಸಿಡಿಲು ಬಿದ್ದ ಕುರಿತು ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ರೈತರಲ್ಲಿ ಭತ್ತ ಹಾಳಾಗುವ ಭೀತಿ: ಅಕಾಲಿಕ ಮಳೆ ಕೆಲ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಭತ್ತ ಬೆಳೆದ ರೈತರು ಬೆಳೆ ಕೈಗೆ ಬಂದು ಕಟಾವು ಮಾಡುವ ಹೊತ್ತಿಗೆ ಮಳೆ ಸುರಿದಿರುವುದು ಬೆಳೆ ಕೈ ಯಿಂದ ಹೋಯಿತು ಎಂದು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಕಂದಾಯ, ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರಕ್ಕೆ ದೊರಕಿಸಲು ಕ್ರಮ ವಹಿಸುವ ಒತ್ತಾಯ ಕೇಳಿ ಬಂದಿದೆ.
ಮಳೆಯಿಂದ ಸ್ವಚ್ಛವಾದ ಚರಂಡಿಗಳಲ್ಲಿ ತುಂಬಿದ ಹೂಳು : ಪಟ್ಟಣದಲ್ಲಿ ಚರಂಡಿಗಳು ಸ್ವಚ್ಛಗೊಳಿಸುವಲ್ಲಿ ಗುರುಮಠಕಲ್ ಪುರಸಭೆ ವಿಫಲವಾಗಿರುವುದು ಮಳೆ ಬಂದಾಗೊಮ್ಮೆ ಸಾಬೀತಾಗುತ್ತದೆ. ಚರಂಡಿಗಳಲ್ಲಿ ತುಂಬಿರುವ ಕೊಳಚೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಸರಿಯಾಗಿ ತೆಗೆಯದೇ ಇರುವುದು ಚರಂಡಿಗಳ ನೀರು ರಸ್ತೆಗೆ ಹರಿದು ಚರಂಡಿಗಳೆಲ್ಲಾ ಸ್ವಚ್ಛವಾಗಿದೆ. ಸರ್ಕಾರಿ ಸಂಬಳ ಪಡೆದು ನಿಯತ್ತಿನಿಂದ ಕೆಲಸ ಮಾಡುತ್ತಿಲ್ಲ, ಆದರೆ ಮಳೆಯಿಂದಾಗಿ ಆದರೂ ಚರಂಡಿಗಳೆಲ್ಲ ಸ್ವಚ್ಛವಾದಂತಾಯಿತು ಎಂದು ಜನ ನೆಮ್ಮದಿ ಪಡುವಂತಾಯಿತು.
