ಯಾದಗಿರಿ: ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಯನ್ನು ಯಾವುದೇ ಲೋಪವಿಲ್ಲದೆ ವ್ಯವಸ್ಥಿತವಾಗಿ ಕೈಗೊಳ್ಳಲು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೌರವಾನ್ವಿತ ನ್ಯಾಯಮೂರ್ತಿ ಡಾ.ಹೆಚ್.ಎನ್. ನಾಗ ಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ವರದಿಯ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಜನಾಂಗದ ಕುಟುಂಬಗಳ ಸಮಗ್ರ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಕೈಗೊಳ್ಳಲು ಸರ್ಕಾರ ನಿರ್ದೇಶಿಸಿದ್ದು, ವ್ಯವಸ್ಥಿತವಾಗಿ ಯಾವುದೇ ಕುಟುಂಬ ಈ ಸಮೀಕ್ಷೆಯಿಂದ ವಂಚಿತರಾಗ ದಂತೆ ಎಚ್ಚರಿಕೆಯೊಂದಿಗೆ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಇದೇ ಮೇ 9 ರಿಂದ 17 ರವರೆಗೆ ಸಮೀಕ್ಷೆ ದಾರರು ಮನೆ ಮನೆಗೆ ಭೇಟಿ ನೀಡಿ ವಿವೇಚನಾಯುತ ನಡೆ- ನುಡಿಯೊಂದಿಗೆ ಭೇಟಿಯ ಉದ್ದೇಶವನ್ನು ಮನವರಿಕೆ ಮಾಡಿ ಮೋಬೈಲ್ ಆಪ್ ನಲ್ಲಿಯೇ ಮಾಹಿತಿಯನ್ನು ಬ್ಲಾಕ್ ಆಧಾರದಲ್ಲಿ ಪ್ರತಿ ಬ್ಲಾಕ್ನಲ್ಲಿ ತಲಾ 300 ಮನೆಗಳ ಕುಟುಂಬಗಳ ಮಾಹಿತಿ ಸಂಗ್ರಹಿಸಬೇಕು.

ನಂತರ ಮೇ 19 ರಿಂದ 21 ರ ವರೆಗೆ ಸಮೀಕ್ಷೆಯಲ್ಲಿ ಕೈಬಿಟ್ಟು ಹೋದ ಕುಟುಂಬಗಳನ್ನು ಗುರುತಿಸಿ ಮಾಹಿತಿ ಸಂಗ್ರಹಿಸಬೇಕು. ಇದರಲ್ಲಿಯೂ ಬಿಟ್ಟು ಹೋದ ಕುಟುಂಬಗಳಿದ್ದಲ್ಲಿ ಆನ್ಲೈನ್ ಮೂಲಕ ಸಂಬಂಧಪಟ್ಟ ಜನಾಂಗದವರು ತಾವಾಗಿಯೇ ಸಮೀಕ್ಷೆಯಡಿ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಕಾರಣ ಸಮೀಕ್ಷೆದಾರರು ಮತ್ತು ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.

ಸಮೀಕ್ಷೆಯ ಮೇಲ್ವಿಚಾರಣೆ ಗಾಗಿ, ರಾಜ್ಯ ಮಟ್ಟದಲ್ಲಿ ಸಮಿತಿ ಇದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಇದೆ,ಜಿ.ಪಂ. ಸಿಇಓ ಉಪಾಧ್ಯಕ್ಷರಾಗಿದ್ದಾರೆ.

ತಾಲೂಕಾ ಮಟ್ಟದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯ ಸಮಿತಿ ಮೇಲ್ವಿಚಾರಣೆ ಮಾಡಲಿದೆ.ಪ್ರತಿ ತಾಲೂಕಿಗೆ ತಲಾ 5 ಮಾಸ್ಟರ್ ಟ್ರೈನರ್ ಆಯ್ಕೆ ಮಾಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನಿಯೋಜಿಸಲಾಗಿದೆ.

ರಾಜ್ಯಮಟ್ಟದಲ್ಲಿ ತರಬೇತಿ ಪಡೆದ ಮಾಸ್ಟರ್ ಟ್ರೈನರ್ ರಾಘವೇಂದ್ರ,ಗುರು ಪಾಟೀಲ್ ಮತ್ತು ಶ್ರೀನಿವಾಸ್ ಅವರ ಮೂಲಕ ಇಂದು ತರಬೇತಿ ನೀಡಿದ್ದು, ರಾಜ್ಯದಲ್ಲಿ ಗುರುತಿಸಿದ 101 ಪರಿಶಿಷ್ಟ ಜಾತಿಗಳ ಜಣಗಣತಿ ನಡೆಯುತ್ತಿದ್ದು,ಇದರ ಅಂಗವಾಗಿ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಯಾವುದೇ ಲೋಪವಿವಿಲ್ಲದೆ ಪ.ಜಾತಿ ಜನಾಂಗದ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಈ ಸಮೀಕ್ಷೆ ಅಂಗವಾಗಿ ಪ್ರಾಥಮಿಕ ಹಾಗೂ ಸಾಮಾಜಿಕವಾಗಿ ಹಾಗೂ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ ಸಹ ಕೈಗೊಳ್ಳಬೇಕು.ಉಪಜಾತಿಗಳ ಅಂಕಿ ಅಂಶ ಸಹ ಸಂಗ್ರಹಿಸಬೇಕೆಂದ ಅವರು ಸಮೀಕ್ಷೆ ನಂತರ ಮೇಲ್ವಿಚಾರಕರಿಂದ ಪರಿಶೀಲನೆ ಸಹ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ತಹಸೀಲ್ದಾರ್ ಸುರೇಶ್ ಅಂಕಲಗಿ, ಪರಿಶಿಷ್ಟ ಜಾತಿ ಕಲ್ಯಾಣಾಧಿಕಾರಿ ಸಿದ್ದಣ್ಣ, ತಾಲೂಕ ಮಟ್ಟದ ಮಾಸ್ಟರ್ ಟ್ರೈನರ್ ಗಳು , ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!