ವಿಶ್ವ ಕಾರ್ಮಿಕರ ದಿನ ಆಚರಣೆ | ಹಿರಿಯ ಮಹಿಳಾ ಕಾರ್ಮಿಕರಿಗೆ ಸನ್ಮಾನ
ಗುರುಮಠಕಲ್: ದೇಶದ ಅಭಿವೃದ್ಧಿಗೆ ಕಾರ್ಮಿಕರ ಶ್ರಮವೇ ಆಧಾರವಾಗಿದೆ. ಕಾರ್ಮಿಕರೇ ದೇಶದ ಬೆನ್ನೆಲುಬು ಆಗಿದ್ದಾರೆ ಎಂದು ತಾಲೂಕು ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ ಅಭಿಪ್ರಾಯಪಟ್ಟರು.
ತಾಲೂಕಿನ ಗಾಜರಕೋಟ ಗ್ರಾಮದ ಕೆರೆ ಹುಳೆತ್ತುವ ಸ್ಥಳದಲ್ಲಿ ವಿಶ್ವಕಾರ್ಮಿಕರ ದಿನದ ಅಂಗವಾಗಿ ಕೂಲಿಕಾರರ ಜೊತೆ ಕೇಕ್ ಕತ್ತರಿಸಿ ಹಿರಿಯ ಕೂಲಿಕಾರರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ ಪ್ರಗತಿಗೆ ಕೂಲಿ ಕಾರ್ಮಿಕರ ಕಾರ್ಯ ಬಹಳ ಮುಖ್ಯವಾಗಿದೆ. ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿ ಆ ದೇಶದ ಕಾರ್ಮಿಕರನ್ನು ಅವಲಂಬಿಸಿದೆ. ಕಾರ್ಮಿಕರಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ ಎಂದರು.
ಕಾರ್ಮಿಕರು ಹಗಲು-ರಾತ್ರಿ, ಬಿಸಿಲು-ಮಳೆ ಎನ್ನದೆ ಸಮರ್ಪಣಾ ಭಾವದಿಂದ ಕಠಿಣ ಶ್ರಮ ವಹಿಸಿ ದುಡಿಯುತ್ತಾರೆ.
ಶ್ರಮ ಜೀವಿಗಳ ಕೆಲಸದ ಕೊಡುಗೆಯನ್ನು ಗೌರವಿಸುವ ಹಾಗೂ ಶ್ರಮಜೀವಿಗಳನ್ನು ಸ್ಮರಿಸಲು ಪ್ರತಿವರ್ಷ ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲಾಗುತ್ತದೆ ಎಂದರು.
ಕಾರ್ಮಿಕರ ಕಾಯ್ದೆ ಮತ್ತು ಹಕ್ಕುಗಳ ಕುರಿತು ಅರಿತುಕೊಳ್ಳಬೇಕು. ಕಾರ್ಮಿಕರಿಗೆ ಸಿಗುವ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಗಂಡು ಹೆಣ್ಣಿಗೂ ಸಮಾನ ಕೂಲಿ ದರ 370 ರೂಪಾಯಿ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಭಾಗವಹಿಸಬೇಕು. ಸಮುದಾಯ ಕಾಮಗಾರಿಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಕ್ಷೇತ್ರ ಬದು, ಕೃಷಿಹೊಂಡ ನಿಮ್ಮ ಹೊಲಗಳಲ್ಲಿ ನಿರ್ಮಿಸಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕೆಲಸಪಡೆದುಕೊಳ್ಳಿ ಎಂದು ವಿನಂತಿಸಿದರು.
ಗಾಜರಕೋಟ ಮತ್ತು ಪಸಪೂಲ್ ಗ್ರಾಮ ಪಂಚಾಯಿತಿ ಗಳಲ್ಲಿ ವಿಶ್ವ ಕಾರ್ಮಿಕ ದಿನದ ಅಂಗವಾಗಿ ಕೂಲಿ ಕಾರ್ಮಿಕರು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಎಫ್ ಟಿ ಯಂಕಣ್ಣ, ಮೇಟಿಗಳಾದ ಭೀಮರಾಯ, ಕಾಳಮ್ಮ ನಾಶಿ, ಐಇಸಿ ತಾಲೂಕು ಸಂಯೋಜಕ ರಾಘವೇಂದ್ರ ಹಾಗೂ ಪಂಚಾಯತಿ ಸಿಬ್ಬಂದಿಗಳು ಮತ್ತು ನರೇಗಾ ಕೂಲಿಕಾರ್ಮಿಕರು ಹಾಜರಿದ್ದರು.
