ಜಯ ಕರ್ನಾಟಕ ಸಂಘಟನೆ ಮನವಿ | ಪುರಸಭೆ ಟೆಂಡರ್ ಗಳ ಮುಂದೂಡಿಕೆ
ಗುರುಮಠಕಲ್: ಪುರಸಭೆ ವತಿಯಿಂದ ವಿವಿಧ ಟೆಂಡರ್‌ಗಳಿಗೆ ಆಹ್ವಾನ ನೀಡಿದ್ದು ಕೆಲವು ಟೆಂಡರ್ ಗಳಿಗೆ ತಾಲೂಕ ಜಯ ಕರ್ನಾಟಕ ಸಂಘಟನೆ ಆಕ್ಷೇಪ ಸಲ್ಲಿಸಿ ಮನವಿ ನೀಡಿದ ನಂತರ ಟೆಂಡರ್ ಗಳು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪಟ್ಟಣದ ಅಭಿವೃದ್ಧಿ, ಪುರಸಭೆ ಕರ ವಸೂಲಿ ಸಂಗ್ರಹಕ್ಕಾಗಿ ತರಕಾರಿ ಮಾರುಕಟ್ಟೆ ಕರ, ಶುದ್ಧ ಕುಡಿಯುವ ನೀರಿನ ಘಟಕದ ಲೀಲಾವು, ಖಸಾಯಿಖಾನೆ ಕರ ಲೀಲಾವುಗಳಿಗೆ ಬುಧುವಾರ ಟೆಂಡರ್ ಪ್ರಕ್ರಿಯೆಗೆ ಪುರಸಭೆ ಚಾಲನೆ ನೀಡಲಾಗಿತ್ತು.
ತಾಲೂಕ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ನಾಗೇಶ ಗದ್ದಿಗಿ ನೇತೃತ್ವದಲ್ಲಿ ಮಂಗಳವಾರದಂದು ಪುರಸಭೆ ಮುಖ್ಯಾಧಿಕಾರಿಗೆ ಖಸಾಯಿಖಾನೆ ಕರ ಲೀಲಾವು ಟೆಂಡರ್ ರದ್ದು ಪಡಿಸಲು ಆಗ್ರಹಿಸಿತ್ತು.
ನಂತರ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿ, ಪಟ್ಟಣದ ಪ್ರವೇಶ ದ್ವಾರದಲ್ಲಿ ಕುರಿ, ಕೋಳಿ ಮಾಂಸದ ಅಂಗಡಿಗಳು ತಲೆ ಎತ್ತಿವೆ, ಇದರಿಂದ ಜನರಿಗೆ ತೊಂದರೆಯಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಮಾಂಸದ ಅಂಗಡಿಗಳ ಅಕ್ಕ ಪಕ್ಕದಲ್ಲಿ ಆಂಜನೇಯ ಹಾಗೂ ಗುಡ್ಡದ ದೇವಸ್ಥಾನವಿದೆ.
ಮಾಂಸದ ಅಂಗಡಿಯವರು ಪುರಸಭೆ ವತಿಯಿಂದ ಯಾವುದೇ ಪರವಾನಿಗೆ ಪಡೆಯದೇ ಅನಾಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಹಲವು ಬಾರಿ ಸಂಘಟನೆ ಸೇರಿ ಬೇರೆ ಸಂಘಟನೆಯವರು ಕ್ರಮ ಕೈಗೊಳ್ಳಲು ಮನವಿ ನೀಡಿದರೂ ಸಹ ಪುರಸಭೆ ಇದುವರೆಗೂ ಕ್ಯಾರೇ ಎನ್ನುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಂಸದ ಅಂಗಡಿಗಳಿಗಾಗಿ ಪುರಸಭೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ತದನಂತರವೇ ಖಸಾಯಿ ಖಾನೆ ಕರ ಟೆಂಡರ್ ಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್ ಹಾಗೂ ಸದಸ್ಯರು ಸ್ಪಂದಿಸಿ ಮತ್ತು ಚರ್ಚಿಸಿ ಟೆಂಡರ್ ಒಂದು ವಾರಗಳ ಕಾಲ ಮುಂದೂಡಿಕೆ ಮಾಡಲಾಗಿದೆ ಎಂದು ಟೆಂಡರ್ ಸಭೆಯಲ್ಲಿ ಪುರಸಭೆ ಅಧ್ಯಕ್ಷರಕ ಘೋಷಿಸಿದರು.
ಈ ವೇಳೆ ಸಂಘಟನೆಯ ಮಲ್ಲಿಕಾರ್ಜುನ್ ಕಾಕಲವಾರ, ಕಾಶಪ್ಪ ದೊರೆ, ರಾಮುಲು ಕೊಡಿಗಂಟಿ, ರವಿ ವಾರದ, ನಿಖಿಲ್ ಡಗೆ, ಯಲ್ಲೂ ಪೂಜಾರಿ, ಹಣಮಂತ ತಾತಾಳಗೇರಿ ಭಗವಂತ ಆಯಾಝ್ ಸೇರಿದಂತೆ ಇನ್ನಿತರ ಭಾಗವಹಿಸಿದ್ದರು.
