ಪತ್ರಿಕಾ ವರದಿ, ಸಂಘಟನೆ ಮನವಿಯಿಂದ ಕೊನೆಗೂ ಎಚ್ಚೆತ್ತ ಪುರಸಭೆ | ಅನಾಧಿಕೃತ ಮಾಂಸದಂಗಡಿ ಬಂದ್ | ಸದಸ್ಯರೊಂದಿಗೆ ಜುಲೈ 18 ರಂದು ಸಭೆ ನಿಗದಿ ?
ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪ್ರವೇಶದಲ್ಲಿ ರಾಜಾರೋಷವಾಗಿ ತಲೆ ಎತ್ತಿದ ಅನಾಧಿಕೃತ ಮಾಂಸದ ಅಂಗಡಿಗಳು ಇಂದು ಕೊನೆಗೂ ತಾತ್ಕಾಲಿಕ ಮುಚ್ಚಿವೆ.
ಬಸ್ ನಿಲ್ದಾಣ ಮಾರ್ಗದ ಪ್ರಮುಖ ರಸ್ತೆಯ ಅಕ್ಕಪಕ್ಕ ಮಾಂಸದ ಅಂಗಡಿ ತಲೆ ಎತ್ತಿರುವುದು ಸಸ್ಯಹಾರಿಗಳಿಗೆ ಕಿರುಕುಳವಾಗಿದೆ. ಅಲ್ಲದೇ ದುರ್ನಾತ ಬೀರುತ್ತಿರುವುದು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುವ ಅನಿವಾರ್ಯತೆ ಎದುರಾಗಿತ್ತು.
ಈ ಬಗ್ಗೆ ಯಾದಗಿರಿಧ್ವನಿ.ಕಾಮ್ ವರದಿ ಮಾಡಿ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡಿತ್ತು. ಯಾವುದನ್ನು ಲೆಕ್ಕಿಸದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಲೇ ಬಂದಿದ್ದರು.
ಕಸಾಯಿ ಖಾನೆ ಸೇರಿ ಹಲವು ಟೆಂಡರ್ ಪ್ರಕ್ರಿಯೆಗೆ ಜುಲೈ 16 ರಂದು ದಿನಾಂಕ ನಿಗದಿಯಾಗಿತ್ತು. ಈ ಮಧ್ಯೆಯೇ ಜಯ ಕರ್ನಾಟಕ ಸಂಘಟನೆ ಪುರಸಭೆ ಕ್ರಮ ವಿರೋಧಿಸಿ ಮಾಂಸದ ಅಂಗಡಿಗಳಿಗೆ ಇಲ್ಲಿಂದ ಬೇರೆಡೆ ವ್ಯವಸ್ಥೆ ಕಲ್ಪಿಸಿ ಟೆಂಡರ್ ಕರೆಯಲು ಮನವಿ ಸಲ್ಲಿಸಿದರು, ತಹಶೀಲ್ದಾರರರು ಮನವಿ ಸ್ವೀಕರಿಸಿದ್ದರು.
ಇಂದು ತಾತ್ಕಾಲಿಕ ಮುಚ್ಚಿದ ಮಾಂಸದ ಅಂಗಡಿಗಳು: ಪುರಸಭೆ ಅಧಿಕಾರಿಗಳ ಮೌಖಿಕ ಆದೇಶದಂತೆ ಮಾಂಸದ ಅಂಗಡಿಗಳು ಮುಚ್ಚಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಇಂದು ಪಟ್ಟಣದ ಬಸ್ ನಿಲ್ದಾಣ ಮಾರ್ಗವಲ್ಲದೇ ವಿವಿಧೆಡೆಯ ಕುರಿ, ಕೋಳಿ ಮಾರಾಟದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಪುರಸಭೆ ಸದಸ್ಯರ ಸಭೆ ಕರೆದ ಅಧಿಕಾರಿಗಳು?: ಮಾಂಸದ ಅಂಗಡಿಗಳು ಅನಾಧಿಕೃತವಾಗಿದೆ. ಪುರಸಭೆಯಿಂದ ಲೈಸೆನ್ಸ್ ಪಡೆದಿದೆಯೇ? ಇತರ ವಿಷಯಗಳ ಕುರಿತು ಚರ್ಚೆ ನಡೆಸಲು ಪುರಸಭೆ ಅಧಿಕಾರಿಗಳು ಶುಕ್ರವಾರ ಜುಲೈ 18 ಕ್ಕೆ ಸದಸ್ಯರ ಸಭೆ ಕರೆದಿದ್ದಾರೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.
ಅದೇನೇ ಇರಲಿ, ಜನ ವಸತಿ ಪ್ರದೇಶದಲ್ಲಿ ಅನಾಧಿಕಗವಾಗಿ ತಲೆ ಎತ್ತಿರುವ ಮಾಂಸದ ಅಂಗಡಿಗಳು ಬೇರೆಡೆ ಶಿಫ್ಟ್ ಮಾಡಿ, ಸೌಕರ್ಯ ಕಲ್ಪಿಸಿ ಕಾನೂನು ನಿಯಮದಂತೆ ಅವರಿಗೆ ಪರವಾನಿಗೆ ನೀಡಿ ಅವರಿಂದ ತೆರಿಗೆ ಪಡೆಯಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಅಧಿಕಾರಿಗಳು ಮತ್ತು ಸದಸ್ಯರು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿ, ಸಸ್ಯಹಾರಿಗಳಿಗೆ ಹಿಂಸೆಯಾಗದಂತೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
