3 ದಿನಗಳ ಅಹೋರಾತ್ರಿ ಹೋರಾಟ ಅಂತ್ಯ | ಬೇಡಿಕೆ ಈಡೇರಿಕೆಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಗ್ರಹ
ಯಾದಗಿರಿ: ಗ್ರಾಮೀಣ ಮತ್ತು ನಗರದ ಕೊಳಗೇರಿ, ದುರ್ಬಲ ವರ್ಗದ ಜನರ ಮನೆ ಮನೆಗೆ ಆರೋಗ್ಯ ಇಲಾಖೆಯ ಸೇವೆಯನ್ನು ತಲುಪಿಸುವಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಗರ್ಭಿಣಿ ಮಹಿಳೆಯನ್ನು ಗುರುತಿಸಿ, ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಕರೆತಂದು, ಸುಲಭ ಹೆರಿಗೆಗೆ ಪ್ರೋತ್ಸಾಹಿಸುವುದು, ಶಿಶುವಿನ ಹಾರೈಕೆ, ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಕ್ಷಯ, ಆನೆಕಾಲು ರೋಗ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಜನತೆಗೆ ತಿಳಿಸುವುದು ಸೇರಿದಂತೆ ಆರೋಗ್ಯ ಇಲಾಖೆ ಮತ್ತು ಜನತೆಯ ನಡುವೆ ಕೊಂಡಿಯಂತೆ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ.
ಆದರೆ, ತಕ್ಕ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕರೆ ನೀಡಿದ ಅಹೋರಾತ್ರಿ ಧರಣಿ ಅಂತ್ಯ ಕಂಡಿದೆ.
ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುತ್ತಿರುವ ಕಾರ್ಯಕರ್ತೆಯರು, ಮುಖ್ಯಮಂತ್ರಿಗಳು ಘೋಷಿಸಿದ – ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ – ಮಾಸಿಕ ಕನಿಷ್ಟ ₹10,000 ಗೌರವ ಧನ ಈ ಏಪ್ರಿಲ್ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸುವುದು, 2025 ಮಾರ್ಚ್ ಬಜೆಟ್ ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ₹1000 ಪ್ರೋತ್ಸಾಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಸಹ ಹೆಚ್ಚಳ ಮಾಡುವುದು, ಜನಸಂಖ್ಯೆ ಹೆಚ್ಚಿಸಿ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು
ಮತ್ತು ಅವೈಜ್ಞಾನಿಕ ಆಶಾ ಪರ್ಫಾಮೆನ್ಸ್ ಅಪ್ರೈಸಲ್ ಕೈಬಿಡುವುದು, ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸುವುದು ಸೇರಿ ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡುವುದು ಹಾಗೂ 2025ರಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಆಶಾ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎನ್ನುವುದು ಪ್ರತಿಭಟನಾ ನಿರತರ ಬೇಡಿಕೆಯಾಗಿದೆ.
ಉನ್ನತ ಹಂತದ ಹೋರಾಟಕ್ಕೆ ಪ್ರತಿಜ್ಞೆ: ಸೇವೆಗೆ ತಕ್ಕದಾದ ವೇತನ ಇಲ್ಲದಿರುವುದರಿಂದ ಹಲವರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಇಡೀ ಜನೆವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಮುಖ್ಯಂತಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.
ಕೊಟ್ಟ ಮಾತು ತಪ್ಪಿದ್ದಕ್ಕೆ ಆಶಾ ಕಾರ್ಯಕರ್ತೆಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಸರ್ಕಾರದ ಮಾತಿನಂತೆ ಏಪ್ರಿಲ್ ನಿಂದ ಅನ್ವಯವಾಗುವಂತೆ 10 ಸಾವಿರ ಗೌರವಧನ ಜಾರಿಮಾಡಬೇಕು ಎಂದು ಎಐಯುಟಿಯುಸಿ ಗೆ ಸೇರ್ಪಡೆ ಹೊಂದಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ)ದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 12, 13, 14 ಆಗಸ್ಟ್ 2025 ಮೂರು ದಿನಗಳ ರಾಜ್ಯವ್ಯಾಪಿ ಆಹೋರಾತ್ರಿ ಧರಣಿ ಇಂದು ಮುಕ್ತಾಯಗೊಂಡಿದೆ.
ಇನ್ನೂ ನಿಷ್ಕಾಳಜಿ ವಹಿಸಿದರೆ ಮುಂದಿನ ಹಂತದಲ್ಲಿ ಹೋರಾಟ ತೀವ್ರ ಕೈಗೊಳ್ಳುವ ಪ್ರತಿಜ್ಞೆಯನ್ನು ಕೈಗೊಳ್ಳುತ್ತಾ ಧರಣಿಯನ್ನು ಅಂತ್ಯಗೊಳಿಸಲಾಯಿತು.
ಮುಖ್ಯಮಂತ್ರಿಗಳಿಗೆ ಬರೆದಿದ್ದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪರವಾಗಿ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳು ಧರಣಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಹ ಉಪಸ್ಥಿತರಿದ್ದರು.
ಎಐಕೆಕೆಎಂಎಸ್ ಜಿಲ್ಲಾಧ್ಯಕರಾದ ಶರಣಗೌಡ ಗೂಗಲ್, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್ ಮತ್ತು ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾಧ್ಯಕರಾದ ಶರಣಪ್ಪ ಜಿ ತೆಳಿಗೇರಿಕರ್ ರವರು ಆಶಾ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕರಾದ ಡಿ ಉಮಾದೇವಿ ಹಾಜರಿದ್ದರು.
