ನಗರಕ್ಕೆ 10 ಹೊಸ ಮಿನಿ ಬಸ್‌ಗಳ ಸಂಚಾರ | ಆಧುನಿಕ ಬಸ್ ತಂಗುದಾಣಗಳ ನಿರ್ಮಾಣ ಮಾಡಿ | ನಗರ ಸಾರಿಗೆ ಸುಧಾರಣೆ ಹಾಗೂ ಸೌಂದರ್ಯೀಕರಣಕ್ಕಾಗಿ ಸಮಗ್ರ ಯೋಜನೆ ಜಾರಿಗೆ ಒತ್ತಾಯ
ಯಾದಗಿರಿ : ನಗರವು ಜಿಲ್ಲಾ ಕೇಂದ್ರವಾಗಿ 16 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ನಗರದ ಜನಸಂಖ್ಯೆ ಹಾಗೂ ವ್ಯಾಪ್ತಿಯು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಆದರೆ ನಗರದ ಒಳಭಾಗದ ಅನೇಕ ರಸ್ತೆಗಳಲ್ಲಿ ದೊಡ್ಡ ಬಸ್‌ಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 10 ಹೊಸ ಮಿನಿ ಬಸ್‌ಗಳನ್ನು ಸಂಚಾರಕ್ಕೆ ಬಿಡಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ, ಯಾದಗಿರಿ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕರುನಾಡು ರಾಜ್ಯ ರೈತ ಸಂಘ ಹಸಿರು ಸೇನೆ ಸಂಯುಕ್ತ ಆಶ್ರಯದಲ್ಲಿ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ, ನಗರದೊಳಗೆ ಮಿನಿ ಬಸ್‌ಗಳ ಸಂಚಾರ ಆರಂಭವಾದರೆ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಅಂಗವಿಕಲರು, ವೃದ್ಧರು ಹಾಗೂ ಮಹಿಳೆಯರಿಗೆ ಸಂಚಾರದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಯಾದಗಿರಿ ನಗರದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿರುವ ಗ್ರಾಮಗಳ ಜನರಿಗೆ ಜಿಲ್ಲಾ ಆಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ ಹಾಗೂ ಇತರೆ ಸರ್ಕಾರಿ ಕಚೇರಿಗಳಿಗೆ ಸುಲಭವಾಗಿ ತಲುಪಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಗರದ ಅಭಿವೃದ್ಧಿಗೆ ಅನುಗುಣವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಸುಂದರ ಹಾಗೂ ಸುಸಜ್ಜಿತ ಯಾದಗಿರಿ ನಗರ ನಿರ್ಮಾಣಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕು – ಚನ್ನಬಸವ ಸಾಹುಕಾರ, ರಾಜ್ಯಾಧ್ಯಕ್ಷರು ಕರುನಾಡು ರಾಜ್ಯ ರೈತ ಸಂಘ ಹಸಿರು ಸೇನೆ.
ನಗರದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ರೀತಿಯಲ್ಲಿ ವೈಜ್ಞಾನಿಕ ರೂಟ್ ಮ್ಯಾಪ್ ಸಿದ್ಧಪಡಿಸಿ, ನಗರ ಸಾರಿಗೆಯನ್ನು ಡಿಜಿಟಲೀಕರಣಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದರೊಂದಿಗೆ ನಗರದಲ್ಲಿ ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ ಹೊಸ ಆಧುನಿಕ ಬಸ್ ತಂಗುದಾಣಗಳನ್ನು ನಿರ್ಮಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮಳೆ ಹಾಗೂ ಬೇಸಿಗೆ ಸಮಯದಲ್ಲಿ ಸಾರ್ವಜನಿಕರಿಗೆ ಆಶ್ರಯ ಸಿಗುವಂತೆಯೇ, ಬಸ್ ತಂಗುದಾಣಗಳ ನಿರ್ಮಾಣದಿಂದ ನಗರದ ಸೌಂದರ್ಯವೂ ಹೆಚ್ಚಲಿದೆ. ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಗೊಂಡು ಎಲ್ಲ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸ್ ಇಲಾಖೆ, ನಗರಸಭೆ, ನಗರ ಸಾರಿಗೆ ಘಟಕ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಸಮಿತಿಯನ್ನು ರಚಿಸಿ, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಜಗದೀಶ, ಭೀಮಾಶಂಕರ, ಮಲ್ಲು ಗುತ್ತೇದಾರ, ಮಾನಪ್ಪ ದಳಪತಿ, ರಫೀಕ್ ಪಟೇಲ್, ಬಾಬಾಖಾನ್, ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.
