ಗಡಿಯಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣ | ಮೂರನೇ ವ್ಯಕ್ತಿಗಳ ಹಾವಳಿಗೆ ಬೀಳಲಿ ಮೂಗುದಾರ | ಗುರುಮಠಕಲ್ ಗೆ ಬರುವರ ಖಡಕ್ ಆಫಿಸರ್ | ಗಡಿ ಠಾಣೆ ಮಾದರಿಯಾಗಿಸಲು ಸಿಎಂ ಪದಕ ವಿಜೇತ ಎಸ್ಪಿ ಕೈಗೊಳ್ಳುವರ ಕ್ರಮ
ರಾಜ್ಯದ ತೆಲಂಗಾಣ ಗಡಿಯ ಮಹತ್ವಾಕಾಂಕ್ಷೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪೊಲೀಸ್ ಠಾಣೆಗೆ ಸಮರ್ಪಕ ಸಿಬ್ಬಂದಿ, ನೂತನ ಕಟ್ಟಡ, ವಸತಿ ಗೃಹದ ಸೌಕರ್ಯ ನೀಡಿ, ಜನಸ್ನೇಹಿ ಆಡಳಿತದ ಮೂಲಕ ರಾಜ್ಯಕ್ಕೆ ಮಾದರಿ ಠಾಣೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಯುವ ನಾಯಕರಾದ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರು ಸರ್ಕಾರದ ಹಂತದಲ್ಲಿ ಪ್ರಯತ್ನಿಸಲಿ ಎನ್ನುವುದು ಜನಾಭಿಪ್ರಾಯವಾಗಿದೆ.
ಯಾದಗಿರಿ ಧ್ವನಿ.ಕಾಮ್ ವಿಶೇಷ
ಯಾದಗಿರಿ : ಗಡಿ ಭಾಗದ ಗುರುಮಠಕಲ್ ಠಾಣೆಯ ಪಿಐ ಸ್ಥಾನಕ್ಕೆ ಹೊಸ ಸಾರಥಿ ಯಾರು?. ಅಕ್ರಮ ಚಟುವಟಿಕೆ ನಿಯಂತ್ರಿಸಬೇಕಿದ್ದ ಅಧಿಕಾರಿ ವ್ಯವಹಾರ ಕುದುರಿಸುವ ಕಾರ್ಯದಿಂದ ಲೋಕಾಯುಕ್ತ ದಾಳಿಗೆ ಒಳಗಾಗಿ, ಅಮಾನತು ಗೊಂಡಿದ್ದು, ಸದ್ಯ ಅಧಿಕಾರಿಯ ನೇಮಕವಾಗಬೇಕಿದೆ.
ಗಡಿ ಭಾಗದಲ್ಲಿ ಅಕ್ರಮ ಮರಳು, ಸೇಂದಿ, ಮಟ್ಕಾ ಹೇಗೆ ರಾಜಾರೋಷವಾಗಿ ಕಾನೂನು ಉಲ್ಲಂಘನೆಯಾಗುತ್ತಿದೆ. ಸ್ಥಳೀಯವಾಗಿ ಇದನ್ನು ತಡೆಯುವವರೇ ಇಲ್ಲದಂತಾಗಿದೆ. ಈ ಹಿಂದೆ ಗುರುಮಠಕಲ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗವಾಗಿದ್ದ ಅಧಿಕಾರಿ ಪುನಃ ಬರುವ ಪ್ರಯತ್ನದಲ್ಲಿದ್ದಾರೆ. ಇನ್ನು ಇಬ್ಬರು ಹೊಸ ಅಧಿಕಾರಿಗಳ ಹೆಸರು ಕೇಳಿ ಬರುತ್ತಿದೆ. ಅಂತಿಮವಾಗಿ ಇಲಾಖೆ ಯಾರನ್ನು ನೇಮಿಸುತ್ತೋ ತಿಳಿಯಲು ಕೆಲದಿನ ಕಾಯಲೇಬೇಕು.
ಸದನದಲ್ಲಿ ಧ್ವನಿ ಎತ್ತಿದ್ದ ಶಾಸಕರು : ಗಡಿ ಭಾಗದಲ್ಲಿ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಸದನದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಧ್ವನಿ ಎತ್ತಿದ್ದನ್ನು ಸ್ಮರಿಸಬಹುದು. ತಮ್ಮ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆ ಸಹಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿಯೇ ಶಾಸಕರು ಆಗಾಗ್ಗೆ ಹೇಳುತ್ತಲೇ ಇರುತ್ತಾರೆ.
ದಕ್ಷ ಅಧಿಕಾರಿ ಬೇಕು : ಗಡಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಖಡಕ್ ಅಧಿಕಾರಿಯ ಅವಶ್ಯಕತೆಯಿದೆ ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ನಿವೃತ್ತಿ ಹತ್ತಿರ ಇರುವವರ ಬದಲು ಯಂಗ್ ಆ್ಯಂಡ್ ಎನರ್ಜೆಟಿಕ್ ಅಧಿಕಾರಿ ನೇಮಕವಾಗುವುದೇ ಕಾದು ನೋಡಬೇಕಿದೆ.
ಕಳೆದ ತಿಂಗಳಷ್ಟೇ ಯಾದಗಿರಿ ಜಿಲ್ಲೆಯ ಎಸ್ಪಿ ಪೃಥ್ವಿಕ್ ಶಂಕರ್, ಪಿಎಸ್ಐ ಮಂಜನಗೌಡ ಪಾಟೀಲ್ ಹಾಗೂ ಸೈಬರ್ ವಿಭಾಗದ ಮುಖ್ಯಪೇದೆ ವಸಂತ ಕುಮಾರ ಮೇಂಗಜಿ ಅವರು ಮುಖ್ಯಮಂತ್ರಿಗಳ ಪದಕ ಪಡೆದು ಗಿರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮೂರನೇ ವ್ಯಕ್ತಿಗಳ ಹಾವಳಿಗೆ ಬೀಳುವುದೇ ಮೂಗುದಾರ?: ಗಡಿಯಲ್ಲಿ ಅಮಾಯಕ ಜನರು ಠಾಣೆಗೆ ಬಂದರೆ ಮಾಹಿತಿ ಪಡೆದು, ಅಧಿಕಾರಿಗಳನ್ನೆ ಮಿಸ್ ಗೈಡ್ ಮಾಡಿ ವ್ಯವಹಾರ ಕುದುರಿಸಿಕೊಳ್ಳುವ ಮೂರನೇ ವ್ಯಕ್ತಿಗಳು ನೊಂದು ಬಂದ ಜನರಿಂದ ಹಣ ಪೀಕುವ ಕಾರ್ಯ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಪರ ಕಾರ್ಯ ಮಾಡಲು ಮುಂದಾಗಬೇಕಿದೆ.
ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ: ಗಡಿ ಭಾಗದ ಗುರುಮಠಕಲ್ ಪೊಲೀಸ್ ಠಾಣೆ ಕಟ್ಟಡ ಬಹು ವರ್ಷಗಳ ಹಳೆಯ ಕಟ್ಟಡವಾಗಿದ್ದು, ಪ್ರವೇಶ ದ್ವಾರದ ಮೇಲ್ಚಾವಣಿ ಸಿಮೆಂಟ್ ಕಿತ್ತು ರಾಡ್ ತೇಲಿದೆ. ಇದರಿಂದ ಮಳೆಗಾಲದಲ್ಲಿ ಸೋರುತ್ತಿರುವುದು ಅನಿವಾರ್ಯವಾಗಿ ಸಿಬ್ಬಂದಿಗಳು ಭಯದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊಸದಾಗಿ ಸಕಲ ಸೌಲಭ್ಯಯುಳ್ಳ ಕಟ್ಟಡದ ಅವಶ್ಯಕತೆಯೂ ಇದೆ.
ವಸತಿ ಗೃಹಗಳಿಲ್ಲದೇ ಸಿಬ್ಬಂದಿ ಪರದಾಟ: ಈ ಹಿಂದೆ ಇದ್ದ ಪೊಲೀಸ್ ವಸತಿ ಗೃಹಗಳನ್ನು ಕೆಡವಿ ಸರ್ಕಾರ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ನೀಡಿದೆ. ಇದರಿಂದ ಪೊಲೀಸ್ ಸಿಬ್ಬಂದಿಗೆ ಇಲಾಖೆಯ ವಸತಿ ಗೃಹಗಳಿಲ್ಲದೇ ಪರದಾಡುವಂತಾಗಿದೆ. ಶೀಘ್ರವೇ ಸರ್ಕಾರ ವಸತಿ ಗೃಹಗಳ ನಿರ್ಮಾಣಕ್ಕು ಕ್ರಮವಹಿಸಲು ಮುಂದಾಗಬೇಕಿದೆ.
ಪೊಲೀಸ್ ಇಲಾಖೆ ಗಡಿಯಲ್ಲಿ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡಲು ದಕ್ಷ ಅಧಿಕಾರಿಯನ್ನು ನೇಮಿಸಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೊಳಿಸಿ ಮಾದರಿ ಪೊಲೀಸ್ ಠಾಣೆ ಯಾಗಲು ಕ್ರಮವಹಿಸಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಗಡಿ ಜಿಲ್ಲೆಯಿಂದಲೇ ಇಲಾಖೆ “ಮಾದರಿ ಠಾಣೆ” ಪ್ರಯೋಗಕ್ಕೆ ಮುಂದಾಗುವುದೇ ಕಾದು ನೋಡೊಣ.
