ಇನ್ನು ಗುರುಮಠಕಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ | ಒಳ ರೋಗಿಗಳ ಆರೋಗ್ಯ ವಿಚಾರಣೆ | ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕ ಎಸ್ ಎನ್ ಕೆ
ಗುರುಮಠಕಲ್: ಗುರುಮಠಕಲ್ ಭಾಗದ ಜನರಿಗೆ ಅನುಕೂಲವಾಗಲು ಡಯಾಲಿಸೀಸ್ ಘಟಕ ಸ್ಥಾಪನೆಗೆ ಸಚಿವರಿಗೆ ಮನವಿ ಮಾಡಲಾಗಿತ್ತು, 5 ಯೂನೀಟ್ ಭರವಸೆ ನೀಡಲಾಗಿತ್ತು, ಈಗ 2 ಯೂನೀಟ್ ನೀಡಲಾಗಿದೆ. ಜನರು ಇದರ ಲಾಭ ಪಡೆಯಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕ ಉದ್ಘಾಟನೆ ಮಾಡಿ ಮಾತನಾಡಿದರು. ಈ ಭಾಗದ ಜನರು ದೂರ ಪ್ರಯಾಣ ಮಾಡುವಂತಾಗಿತ್ತು, ಖಾಸಗಿಯಾಗಿ ಮಾಡಲು ಸಾಕಷ್ಟು ಹಣ ವ್ಯಯಿಸಿ ಚಿಕಿತ್ಸೆ ಪಡೆಯಲು ನಮ್ಮ ಜನರಿಗೆ ತೊಂದರೆಯಾಗಿತ್ತು. ಸಚಿವರಿಗೆ ಮನವಿ ಮಾಡಿ ಜನರಿಗೆ ಡಯಾಲಿಸೀಸ್ ಮಾಡಿಸಿಕೊಳ್ಳಲು ಆಗುವ ತೊಂದರೆಯನ್ನು ತಪ್ಪಿಸುವ ಕಾರ್ಯ ಮಾಡಲಾಗಿದೆ ಎಂದರು.
ಕಿಡ್ನಿ ವಿಫಲವಾದಾಗ, ರಕ್ತದಿಂದ ಹಾನಿಕಾರಕ ತ್ಯಾಜ್ಯ ವಸ್ತುಗಳು, ವಿಷಕಾರಿ ಅಂಶಗಳು ಮತ್ತು ಹೆಚ್ಚುವರಿ ದ್ರವವನ್ನು ಕೃತಕವಾಗಿ ತೆಗೆದುಹಾಕುವ ಜೀವ ಉಳಿಸುವ ವೈದ್ಯಕೀಯ ಚಿಕಿತ್ಸಾ ವಿಧಾನವಾಗಿದೆ. ಇದು ಮೂತ್ರಪಿಂಡಗಳ ಕೆಲಸವನ್ನು (ಫಿಲ್ಟರಿಂಗ್) ಯಂತ್ರ ಅಥವಾ ದೇಹದ ಒಳಪದರದ ಮೂಲಕ ಡಯಾಲಿಸೀಸ್ ಮಹತ್ವದ ಪಾತ್ರವಹಿಸುತ್ತದೆ.
ಜನರ ಆರೋಗ್ಯ ಕಾಳಜಿವಹಿಸಿ : ಗ್ರಾಮೀಣ ಭಾಗದ ಅಮಾಯಕ ಜನರು ಇಲ್ಲಿಗೆ ಚಿಕಿತ್ಸೆಗಾಗಿ ಬರುತ್ತಾರೆ ಅವರೊಂದಿಗೆ ಸೌಜನ್ಯಜಿಂದ ವರ್ತಿಸಿ, ಉತ್ತಮ ಚಿಕಿತ್ಸೆ ನೀಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಒಂದೇ ಸ್ಟಾಂಡ್ ಗೆ ಇಬ್ಬರು ರೋಗಿಗಳಿಗೆ ಗುಲ್ಕೋಸ್ ಬಾಟಲ್ ಹಚ್ಚಿದ್ದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಈ ರೀತಿ ಮಾಡಿದರೆ ರೋಗ ಕೈ ಅಲುಗಾಡಿಸಲು ಆಗಲ್ಲ, ಇಷ್ಟು ಸಾಮಾನ್ಯ ಜ್ಞಾನ ಇಲ್ಲವೇ ಎಂದು ಜಾಡಿಸಿದರು.
ಪ್ಲಾಸ್ಟಿಕ್ ಬಳಕೆ ಕಟ್ಟುನಿಟ್ಟಾಗಿ ಬಂದ್ ಮಾಡಲು ಸೂಚನೆ : ಪ್ಲಾಸ್ಟಿಕ್ ಬಳಕೆಯಿಂದಾಗಿ ಮಾರಾಕ ಕ್ಯಾನ್ಸರ್ ಪ್ರಕರಣಗಳು ಕಂಡು ಬರುತ್ತಿದೆ. ವಿಜಯನಗರ, ಯಾದಗಿರಿ ಜಿಲ್ಲೆಯಲ್ಲಿ ರಾಸಾಯನಿಕ ಬಳಕೆ, ಪ್ಲಾಸ್ಟಿಕ್ ನಲ್ಲಿ ಚಹಾ, ತಿನ್ನುವ ವಸ್ತು ಹಾಕುವುದರಿಂದ ಹೆಚ್ಚಿನ ಪ್ರಕರಣಗಳು ಕಾಣುತ್ತಿವೆ. ಈ ಬಗ್ಗೆ ಪುರಸಭೆ ಹಾಗೂ ತಹಸೀಲ್ದಾರದು ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದರು.
ಆಹಾರ ಗುಣಮಟ್ಟ ಪರಿಶೀಲಿಸಿ : ಎಲ್ಲೆಂದರಲ್ಲಿ ಧಾಬಾಗಳು ತಲೆ ಎತ್ತಿವೆ. ಫಾಸ್ಟ್ ಫುಡ್, ಜ್ಯೂಸ್, ಚಹಾ ಅಂಗಡಿಗಳು ತಲೆ ಎತ್ತಿವೆ. ಇವುಗಳಲ್ಲಿ ಸರಿಯಾದ ಗುಣಮಟ್ಟದ ಆಹಾರ ಸಿಗುತ್ತಿದೆಯೇ ಎಂದು ಪರಿಶೀಲಿಸುವ ಜವಾಬ್ದಾರಿ ಯಾರದು? ಜನರ ಆರೋಗ್ಯ ಕಾಪಾಡುವುದು ತಮ್ಮ ಕಾಳಜಿ ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು.
ಅಧಿಕಾರಿಗಳಿಗೆ ಫೋನ್ ಮಾಡಿದ ಶಾಸಕರು: ನಗರ, ಗ್ರಾಮೀಣ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗಿ ಜನರ ಆರೋಗ್ಯ ಕೆಡುತ್ತಿದೆ. ಚಹಾ ಅಂಗಡಿಯಲ್ಲಿ ಯಾವ ಹಾಲು ಇದೆ? ಇದನ್ನು ಯಾರು ನೋಡಬೇಕು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಗಂಭೀರವಾಗಿ ಪರಿಗಣಿಸಿ ಇಲ್ಲದಿದ್ದರೆ ಮುಂದೆ ನೀವೇ ಜವಾಬ್ದಾರರು ಎಂದು ಹೇಳಿದರು.
ಕಟ್ಟಡ ಕಾಮಗಾರಿ ಪರಿಶೀಲನೆ : ಗುರುಮಠಕಲ್ ಸಮುದಾಯ ಆಸ್ಪತ್ರೆಗೆ ಅಂಟಿಕೊಂಡು ಹೆಚ್ಚುವರಿ 20 ಬೆಡ್ ಸಾಮರ್ಥ್ಯದ ಅಂದಾಜು ₹6.44 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶಾಸಕರು ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳಿಗೆ ಮಾತನಾಡಿ ಇನ್ನು ಅನುಕೂಲವಾಗಲು 100 ಬೆಡ್ ಗೆ ಏರಿಸಲು ಹೆಚ್ಚುವರಿ ಅಂದಾಜು ಪಟ್ಟಿಯನ್ನು ತಯಾರಿಸಲು ಸೂಚನೆ ನೀಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆಯಡಿ ಅನುದಾನ ನೀಡುವ ಭರವಸೆ ನೀಡಿದರು.
ಈ ವೇಳೆ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ, ತಾಲೂಕು ಆರೋಗ್ಯಾಧಿಕಾರಿ ಹಣಮಂತ ರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಎಂ, ಆರೋಗ್ಯ ಅಧಿಕಾರಿ ಮಹೇಶ ಸಜ್ಜನ್, ಪ್ರಮುಖರಾದ ಶರಣು ಆವುಂಟಿ, ಪ್ರಕಾಶ ನೀರೆಟಿ, ಬಸ್ಸಣ್ಣ ದೇವರಹಳ್ಳಿ, ರವಿ ಗವಿನೋಳ್, ಆಶನ್ನ ಬುದ್ಧ, ನರಸರೆಡ್ಡಿ ಗಡ್ಡೆಸೂಗುರ, ಬಾಲರಾಜ್ ದಾಸರಿ, ಮಕಬುಲ್ ಪ್ಯಾರೆ, ಸತ್ಯನಾರಾಯಣ ತಿವಾರಿ, ಬನ್ನಪ್ಪ ಇತರರು ಇದ್ದರು.
