ಶ್ರೀಪಾದ ವಲ್ಲಭರು ಸಾಧನೆ ಮಾಡಿದ ಪುಣ್ಯ ಭೂಮಿ ಕುರುವಪುರ | ಸ್ವಾಮಿ ಜ್ಞಾನ ಪ್ರಭು ಅಭಿಮತ

ರಾಯಚೂರು: ತಾರಕೇಶ್ವರ ಫೌಂಡೇಶನ್ (ವಿಶಾಖಪಟ್ಟಣ), ಪ್ರಜ್ಞಾ ಸ್ವಾಮೀಜಿ ಮತ್ತು ರಾಯಚೂರಿನ ಅವರ ಭಕ್ತರ ಬಳಗದಿಂದ ಜಿಲ್ಲೆಯ ಡೊಂಗ ರಾಂಪುರ (ಕುರು ಗಡ್ಡಾ) ಗ್ರಾಮದಲ್ಲಿ ‘ರಾಯಚೂರು ಶಾಂಭಾಲಾ ಮಾಸ್ಟರ್ ಸಂಗೀತ್ ಸಮಾರೋಹ್ -2025’ ಹೆಸರಿನ ಮೂರನೇ ವರ್ಷದ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು. ಭರತನಾಟ್ಯ, ವಾದ್ಯ ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ತಾರಕೇಶ್ವರ ಫೌಂಡೇಶನ್ನಿನ ಸಂಸ್ಥಾಪಕರು ಹಾಗೂ ಕಾರ್ಯಕ್ರಮದ ಪ್ರಧಾನ ಆಯೋಜಕರೂ ಆದ ಸ್ವಾಮಿ ಜ್ಞಾನ ಪ್ರಭು ಅವರು ಮಾತನಾಡಿ, ಕುರುವಪುರ ಗ್ರಾಮವು ಕೃಷ್ಣಾ ನದಿಯ ತಟದಲ್ಲಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿ ಸ್ಥಿತವಾಗಿದ್ದು, ಕಲಿಯುಗದ ಮಹಾನ್ ಸಂತರಾದ ಶ್ರೀಪಾದ ವಲ್ಲಭ ದಿಗಂಬರರು ಸಾಧನೆ ಮಾಡಿದ ಅತ್ಯಂತ ಪುಣ್ಯ ಭೂಮಿಯಾಗಿದೆ.

ಈ ಗ್ರಾಮವನ್ನು ಸ್ಥಳೀಯವಾಗಿ ಕುರುಗಡ್ಡೆ, ವಲ್ಲಭಪುರ ಎಂದೂ ಕರೆಯಲಾಗುತ್ತದೆ. ಸ್ಕಂದ ಪುರಾಣದಲ್ಲಿ ಈ ಸ್ಥಳವನ್ನು ಗುರುದ್ವೀಪ ಎಂದು ಕರೆಯಲಾಗಿದೆ ಮತ್ತು ಹಿಮಾಲಯದ 28‌ ಸಾವಿರ ಯೋಗಿಗಳು ಮತ್ತು ಸಿದ್ಧಿಗಳು ಈ ಸ್ಥಳಕ್ಕೆ ಭೇಟಿ ನೀಡಿದ್ದರು ಹಾಗೂ ಭಗವಾನ್ ದತ್ತಾತ್ರೇಯರಿಂದ ಆಶೀರ್ವಾದ ಪಡೆದಿದ್ದರು ಎಂದು ವಿವರಿಸಲಾಗಿದೆ ಎಂದು ತಿಳಿಸಿದರು.ಮುಂದುವರಿದು ಮಾತನಾಡಿದ ಅವರು, ಸಂತರು, ತಪಸ್ವಿಗಳು, ಮಹಾನ್ ಜ್ಞಾನಿಗಳು ಹಾಗೂ ಪವಾಡ ಪುರುಷರೂ ಆಗಿರುವ ಶ್ರೀಪಾದ ವಲ್ಲಭ‌ ದಿಗಂಭರನ್ನು ಕಲಿಯುಗದಲ್ಲಿ ಜನಿಸಿದ ದತ್ತಾತ್ರೇಯನ ಮೊದಲ ಅವತಾರ ಎಂದು ಪುರಾಣಗಳಲ್ಲಿ ಕರೆಯಲಾಗಿದೆ. ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿರುವ ಪಿಠಾಪುರಂನಲ್ಲಿ ಅಪ್ಪಲರಾಜು ಶರ್ಮ ಮತ್ತು ಸುಮತಿ ದಂಪತಿಗಳ ಸುಪುತ್ರನಾಗಿ ಜನಿಸಿದ ಅವರು ಭವಿಷ್ಯದಲ್ಲಿ ದಿವ್ಯ ಜ್ಞಾನವನ್ನು ಹೊಂದಿ ಒಬ್ಬ ಮಹಾನ್ ಸಂತರಾಗಿ, ಪವಾಡ ಪುರುಷರಾಗಿ ಬೆಳೆದರು.

ದೇಶ ಸಂಚಾರ ಮಾಡಿ, ಅನೇಕ‌ ಪುಣ್ಯ ಪುರುಷರು, ಪುಣ್ಯ ಕ್ಷೇತ್ರಗಳನ್ನು ಭೇಟಿ ಮಾಡಿದ್ದ ಅವರು ತಾವು ನಡೆದ ದಾರಿಯಲ್ಲಿ ಅನೇಕ ಪವಾಡಗಳನ್ನು ತೋರಿದ್ದರು ಜೊತೆಗೆ ಅನೇಕ ವ್ಯಕ್ತಿ-ಊರುಗಳಿಗೆ ಸುಭಿಕ್ಷೆಯನ್ನು ಕರುಣಿಸಿದ್ದರು. ಇಂತಹ ಒಬ್ಬ ಮಹಾನ್ ಪುರುಷ ಸುಮಾರು 35 ವರ್ಷಗಳ ಕಾಲ ರಾಯಚೂರು‌ ಜಿಲ್ಲೆಯ ಕುರವಪುರದಲ್ಲಿ ಜ್ಞಾನ, ವೈರಾಗ್ಯ ಸಿದ್ಧಿಗಾಗಿ ತಪಸ್ಸು ಮಾಡಿದರು.ಇದೇ ಕುರವಪುರದ ಕೃಷ್ಣಾ ನದಿಯಲ್ಲಿ ಅಶ್ವಿಜ ಬಹುಳ ದ್ವಾದಶಿಯಂದು ತಮ್ಮ ಅವತಾರವನ್ನು ಮುಗಿಸಿದರು. ಅವತಾರ ಅಂತ್ಯದ ಹೊರತಾಗಿಯೂ, ಶ್ರೀ ಶ್ರೀಪಾದ ವಲ್ಲಭರು ಇಂದಿಗೂ ಸೂಕ್ಷ್ಮ ರೂಪದಲ್ಲಿ ತಮ್ಮ ಉಪಸ್ಥಿತಿಯನ್ನು ಅಲ್ಲಿಯೇ ಉಳಿಸಿಕೊಂಡು ತಮ್ಮ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿರುವ ಭಕ್ತರಿಗೆ ಪರೋಕ್ಷ ದರ್ಶನವನ್ನು ನೀಡುತ್ತಿದ್ದಾರೆ (ಅಸ್ತಂಗತರಾದ ಬಳಿಕ ಶ್ರೀಶೈಲ ಪುಣ್ಯ ಕ್ಷೇತ್ರದಲ್ಲಿ ಸಶರೀರವಾಗಿ ಪ್ರತ್ಯಕ್ಷರಾದರು‌ ಮತ್ತು ಅವರು ಚಿರಂಜೀವಿಗಳಾಗಿದ್ದಾರೆ ಎಂಬ ಪ್ರತೀತಿಯೂ ಇದೆ).

ಈ ನೆಲ‌ದಲ್ಲಿ ಶತಕಗಳ ಹಿಂದೆಯೇ ಕಳೆದು ಹೋಗಿರುವ ಭಕ್ತಿ, ಧ್ಯಾನ, ಸಂಗೀತದ ವೈಭವ ಮತ್ತು ಶಕ್ತಿಯನ್ನು ಮತ್ತೆ ಜಾಗೃತಗೊಳಿಸುವ ದೃಷ್ಟಿಯಿಂದ ಪುಣ್ಯ ಭೂಮಿ ಕುರುವಪುರದಲ್ಲಿ ವಿಶ್ವ ಕುಂಡಲಿನಿ ಕೇಂದ್ರವನ್ನು ಸ್ಥಾಪಿಸುವ ಯೋಜನೆ ಇದ್ದು, ಅದಕ್ಕಾಗಿ ಅಗತ್ಯ ತಯಾರಿಯೊಂದಿಗೆ ಶ್ರಮಿಸಲಾಗುತ್ತಿದೆ ಎಂದು‌ ಮಾಹಿತಿ‌ ನೀಡಿದರು.

ಕಾರ್ಯಕ್ರಮದಲ್ಲಿ ಕುಮಾರಿ ದಿಶಾ ಉಮೇಶ್ ಏಕ ವ್ಯಕ್ತಿ ವಿಭಾಗದ ಭರತನಾಟ್ಯ, ವಿದ್ವಾನ್ ವಿಕಾಸ್ ಮೈತ್ರೇಯಿ ಅವರು ಸಂಗೀತ ಗಾಯನ, ವಿದ್ವಾನ್ ಶಣ್ಮುಖ ಶ್ರೀವತ್ಸಾ ಅವರು ವಯೋಲಿನ್, ವಿದ್ವಾನ್ ಕಸ್ತೂರಿ ಭಾರ್ಗವ್ ಅವರು ಮೃದಂಗ ವಾದ್ಯ ಕಾರ್ಯಕ್ರಮವನ್ನು ಹಾಗೂ ಕುಮಾರಿ ಅನನ್ಯಾ ಕೃಷ್ಣ ಕುಮಾರ್, ಕುಮಾರಿ ನಂದಿನಿ ಶ್ರೀಪತಿ, ಕುಮಾರಿ ಅನಘಾ ಕೃಷ್ಣ ಕು‌ಮಾರ್ ಅವರು ಗುಂಪು ವಿಭಾಗದ ಭರತನಾಟ್ಯ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.ಈ ಸಂದರ್ಭದಲ್ಲಿ ಗಣ್ಯರು ಹಾಗೂ ಕಾರ್ಯಕ್ರಮದ ಸಹ ಸಂಘಟಕರಾದ ಲಾಲಜಿ ಪಟೇಲ್, ಅಶೋಕ್ ಪಾಟೀಲ್ ಅತನೂರ್, ಕೊಂಡ ಹನುಮೇಶ್, ರಮೇಶ್ ಚಂದ್ ಜೈನ್, ಮನಸುಖ್ ಪಟೇಲ್, ಡಾ.ಜಿ.ಬಿ.ಕುಲಕರ್ಣಿ, ದಿನೇಶ್ ಭಾನುಶಾಲಿ, ಡಾ.‌ಆನಂದ ತೀರ್ಥ ಪಡ್ನವಿಸ್, ಡಾ. ಕಿರಣ್ ಖೇಣೇದ್, ಡಾ. ಶ್ರೀಶ ಪದ್ಯ, ವಿಜಯ್ ಸರೋದೆ, ಸುನೀಲ್ ಬಂಢಾರಿ, ನಾಗವೇಣಿ.ವಿ.ಎಸ್ ಸೇರಿದಂತೆ ಗ್ರಾಮದವರು ಉಪಸ್ಥಿತರಿದ್ದರು. ಗ್ರೀನ್ ರಾಯಚೂರು ಸಂಸ್ಥೆಯ ಅಧ್ಯಕ್ಷರಾದ ಸರಸ್ವತಿ ಕಿಲಿಕಿಲೆ ಅವರು ನಿರೂಪಿಸಿದರು ಮತ್ತು ಕಾರ್ಯದರ್ಶಿಯಾದ ರಾಜೇಂದ್ರ ಕುಮಾರ್ ಶಿವಾಳೆ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!