ಯಾನಾಗುಂದಿ ಸೂರ್ಯನಿಂದ ಬೆಟ್ಟದಲ್ಲಿ ಗ್ರಾಮದ ಮುಖಂಡರ ಪತ್ರಿಕಾಗೋಷ್ಠಿ | ಹಲವು ಆರೋಪ ಹೊತ್ತ ಶಿವಯ್ಯ ಸ್ವಾಮಿ ಮತ್ತವರ ಮಗ ಟ್ರಸ್ಟ್ ನಿಂದ ಹೊರಬರಲು ಪಟ್ಟು
ಗುರುಮಠಕಲ್/ ಸೇಡಂ : ತಾಲೂಕಿನ ಮಾತಾ ಮಾಣಿಕೇಶ್ವರಿ ಅಮ್ಮ ನವರ ಸೂರ್ಯನಂದಿ ಬೆಟ್ಟ ಈಗ ಹಲವು ಗೊಂದಲಗಳ ಗೂಡಾಗಿದೆ. ಪವಿತ್ರ ಕ್ಷೇತ್ರದಲ್ಲಿ ಅಪವಿತ್ರ ಕೈಗಳಿಗೆ ಅಧಿಕಾರ ಸಿಕ್ಕು ಅವ್ಯವಹಾರಕ್ಕೆ ದಾರಿ ಮಾಡಿಕೊಟ್ಟಂತಾಗಿದೆಯೇ ಎನ್ನುವ ಪ್ರಶ್ನೆ ಕಾಡತೊಡಗಿದೆ.
1966 ರಲ್ಲಿ ಟ್ರಸ್ಟ್ ರಚನೆ ಮಾಡಲಾಗಿತ್ತು, ಆಗ ಮೊದಲ ಅಭಿವೃದ್ಧಿಗೆ ರಾಮರೆಡ್ಡಿ ಪಾಟೀಲ್ ದುಡಿದಿದ್ದಾರೆ. ಇದೀಗ ಇಲ್ಲಿನ ಕಾರ್ಯದರ್ಶಿಯಾಗಿದ್ದ ಶಿವಯ್ಯ ಸ್ವಾಮಿ ಅವರು ಅಧ್ಯಕ್ಷರಾಗಿ, ಅವರ ಮಗನನ್ನು ಕಾರ್ಯದರ್ಶಿಯಾಗಿ ಮಾಡಿ ತನ್ನದೇ ದರ್ಬಾರ್ ನಡೆಸುತ್ತಿದ್ದಾರೆ ಎಂದು ಮುಖಂಡ ಪ್ರಕಾಶ್ ರೆಡ್ಡಿ ಯಾನಾಗುಂದಿ ಆಕ್ರೋಶ ವ್ಯಕ್ತಪಡಿಸಿದರು.
ಸೂರ್ಯನಂದಿ ಕ್ಷೇತ್ರ ಬೆಟ್ಟದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ದುಡಿದು ರಾಮರೆಡ್ಡಿ ಅವರ ಕುಟುಂಬವನ್ನು ಮತ್ತು ಸ್ಥಳೀಯರನ್ನು ಸಂಪೂರ್ಣವಾಗಿ ಹೊರಗಿಟ್ಟು ತನ್ನ ತಾಳಕ್ಕೆ ಕುಣಿಯುವವರನ್ನು ನೇಮಿಸಿಕೊಂಡು ಅವ್ಯವಹಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಂಪೂರ್ಣ ವಿವರ ತೋರಿಸಿ ಪದದಿಂದ ಮುಕ್ತಗೊಳ್ಳದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಅಲ್ಲದೇ ಕ್ಷೇತ್ರವನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸಲು ಸ್ಥಳೀಯರು ಚಿಂತನೆ ನಡೆಸುತ್ತಿದ್ದೇವೆ ಎಂದರು.
ಹಿಂದೆ ರಾಮರೆಡ್ಡಿ ಪಾಟೀಲ್ ಅವರ ಶ್ರಮದಿಂದಲೇ ಮೈಸೂರು ಸರ್ಕಾರ ಭೂಮಿ ನೀಡಿದೆ. ಹಿರಿಯರ ಕೊಡುಗೆ ಮರೆಮಾಚಿದ್ದಾರೆ. ಸ್ಥಳೀಯರ ಸಹಕಾರ ಇಲ್ಲದೇ ಹೊರಗಿನ ವರು ಏನು ಮಾಡಲು ಸಾಧ್ಯ ಎಂದು ರಘುನಾಥ ರೆಡ್ಡಿ ಹೇಳಿದರು. ಅಭಿವೃದ್ಧಿಗೆ ಸಹಕಾರ ನೀಡಿದವರಿಗೆ ಆದ್ಯತೆ ಇಲ್ಲ. ಶಿವಯ್ಯ ಮೇಲೆ 2011ರಲ್ಲಿ ಕೇಸ್ , ಸುಬ್ಬಾರಾರ ಮೇಲೆ ಹಲ್ಲೆ, ಟ್ರಸ್ಟ್ ಬೈಲಾ ಬದಲಾವಣೆ, ಮಗನಿಗೆ ಕಾರ್ಯದರ್ಶಿ ಹುದ್ದೆ ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡು ಹಲವು ಆರೋಪಗಳಿವೆ. ಅವರಿಗೆ ಇಲ್ಲಿ ಮುಂದುವರೆಯುವ ಅರ್ಹತೆ ಇಲ್ಲ. ಟ್ರಸ್ಟ್ ನಿಂದ ದೂರು ಇರಲು ಸಿದ್ಧ ಎಂದಿರುವ ಶಿವಯ್ಯ ಅವರು ಯಾವಾಗ ದೂರ ಆಗುತ್ತಾರೆ ಎಂದು ಹೇಳಲಿ ಎಂದು ಪ್ರಶ್ನಿಸಿದರು. ಕ್ಷೇತ್ರಕ್ಕೆ ಸಂಬಂಧಿಸಿದ ಲೇವಾದೇವಿ, ಬಾಡಿಗೆ, ಗೋ ಶಾಲೆ, ಶಾಲೆಗಳ ವಿವರ ಎಲ್ಲಾ ಲೆಕ್ಕಪತ್ರ ತೋರಿಸಬೇಕು ಎಂದರು.
ಹೊಸ ಟ್ರಸ್ಟ್ ನಿರ್ಮಾಣ ಆಗಬೇಕು, ಏನು ಮಾಡದವರಿಗೆ ಸ್ಥಾನಮಾನ ನೀಡಲಾಗಿದೆ. ಯಾನಾಗುಂದಿ ಆಶ್ರಮಕ್ಕೆ ರಾಮರೆಡ್ಡಿ ಪಾಟೀಲ್ ಅವರ ಸೇವೆ ಅಮ್ಮನವರೇ ಹೇಳಿದ್ದಾರೆ. 1953-54ರ ವೇಳೆ ರಾಮರೆಡ್ಡಿ ಪಾಟೀಲ್ ಅವರು ಜಮೀನು ಬರೆದು ಕೊಟ್ಟಿದ್ದಾರೆ.
ಶಿವಯ್ಯ ಸ್ವಾಮಿ ಅವಹೇಳನ ಮಾಡಿದ್ದಾರೆ. ಕುಂಭ ಮೇಳಕ್ಕೆ ಯಾಕೆ ಹೋಗುತೀರಿ, ತಿರುಪತಿಗೆ ಯಾಕೆ ಹೋಗುತ್ತೀರಿ ಎಂದು ಹಿಂದು ಧರ್ಮದ ಕುರಿತು ಅವಹೇಳನ ಮಾಡಿದ್ದಾರೆ.ಆತನ ಸಂಬಂಧಿಗಳು ಅನ್ಯ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ಕೇಳಿ ಬಂದಿದೆ. ಅವರೊಟ್ಟಿಗೆ ಸೇರಿ ಕ್ಷೇತ್ರ ಅನ್ಯ ಧರ್ಮಕ್ಕೆ ಮಾರ್ಪಾಡು ಮಾಡಲು ಹೊರಟಿದ್ದಾರಾ ?. ಶಿವಯ್ಯ ಸ್ವಾಮಿ ಅವ್ಯವಹಾರದಲ್ಲಿ ತೊಡಗಿದ್ದಾರೆ. ಏಕಾಧಿಪಥ್ಯ ನಡೆಸುತ್ತಿದ್ದಾರೆ. ಶಿವಯ್ಯ ಸ್ವಾಮಿ ಮಗ, ಅಳಿಯ ರನ್ನು ಕರೆದುಕೊಂಡು ಬಂದು ಕಬಳಿಸಲು ಸಂಚು ರೂಪಿಸುತ್ತಿದ್ದಾರೆ ಎನ್ನುವ ಸಂಶಯ ಕಾಡುತ್ತಿದೆ ಎಂದು ಜಗನ್ನಾಥ ರೆಡ್ಡಿ ಅವರ ಮೊಮ್ಮಗ ಭೀಮರೆಡ್ಡಿ ಹೈದರಾಬಾದ್ ಅವರು ಹೇಳಿದರು.
ಯಾವುದೇ ಕಾರಣ ನೀಡದೇ ಕೋಡ್ಲಾ ಪರ್ವತರೆಡ್ಡಿ ಅವರನ್ನು ಟ್ರಸ್ಟ್ ನಿಂದ ಗೆದಿದ್ದಾರೆ. ಮನಸ್ಸಿಗೆ ಬಂದಂತೆ ವರ್ತಿಸಿ, ಸುಕ್ಷೇತ್ರದ ಹೆಸರು ಕೆಡಿಸುತ್ತಿದ್ದಾರೆ ಎಂದು ಮಲ್ಲಣ ಗೌಡ ಕೋಡ್ಲಾ ಹೇಳಿದರು. ಈ ವೇಳೆ ಬ್ರಹ್ಮಾನಂದ ರೆಡ್ಡಿ, ಜಗನ್ನಾಥ ರೆಡ್ಡಿ, ಮಾಣಿಕ ರೆಡ್ಡಿ, ರಮೇಶ ರೆಡ್ಡಿ, ಶಿವಶಂಕರರೆಡ್ಡಿ ಇದ್ದರು.
