ಮಹತ್ವಾಕಾಂಕ್ಷೆ ಜಿಲ್ಲೆ ಪ್ರಗತಿ ಪರಿಶೀಲನಾ ಸಭೆ |ಜಂಟಿ ಕಾರ್ಯದರ್ಶಿ ಸಮೀರ್ ಶುಕ್ಲಾ ಸೂಚನೆ

ಯಾದಗಿರಿ: ಪ್ರಧಾನಮಂತ್ರಿಗಳ ವಿಶೇಷ ಕಾರ್ಯಕ್ರಮಗಳಡಿಯ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಒಳಗೊಂಡಿದ್ದು, ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಲಾಭ ದೊರಕಿಸುವಂತೆ ಭಾರತ ಸರ್ಕಾರದ ಹಣಕಾಸು ಸೇವೆಗಳ , ಜಂಟಿ ಕಾರ್ಯದರ್ಶಿ ಸಮೀರ್ ಶುಕ್ಲಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಹಿಂದುಳಿದ 112 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ, ವಿವಿಧ ಕ್ಷೇತ್ರಗಳಲ್ಲಿ ಯಾದಗಿರಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನೀತಿ ಆಯೋಗ ಗುರಿ ನಿಗದಿಪಡಿಸಿದೆ. ಜನರ ಆರೋಗ್ಯ ಮತ್ತು ಪೌಷ್ಟಿಕ, ಕೃಷಿ ಮತ್ತು ಜಲ ಸಂಪನ್ಮೂಲ, ಶಿಕ್ಷಣ, ಆರ್ಥಿಕ ಸೇರ್ಪಡೆ ಹಾಗೂ ಕೌಶಲಾಭಿವೃದ್ಧಿ ಮತ್ತು ಮೂಲಸೌಕರ್ಯಗಳ ಕುರಿತು 49 ಸೂಚ್ಯಂಕ ನೀಡಲಾಗಿದೆ.ಇವುಗಳಲ್ಲಿ ಸೂಕ್ತ ಪ್ರಗತಿ ಸಾಧಿಸಲು ಸಂಬಂಧಿಸಿದ ಅಧಿಕಾರಿಗಳು ಜವಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು.

ವಿಶೇಷವಾಗಿ ಬಡಜನರು,ಮಧ್ಯಮ ವರ್ಗದವರಿಗಾಗಿ ಪಿ.ಎಮ್ ಸ್ವನಿಧಿ, ಮುದ್ರಾ, ಹಾಗೂ ವಿಶ್ವಕರ್ಮ ಯೋಜನೆಗಳತ್ತ ಹೆಚ್ಚಿನ ಗಮನಹರಿಸಬೇಕು .ಅದರಂತೆ ಪ್ರಧಾನ ಮಂತ್ರಿಗಳ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಗಳು ಕಡುಬಡವರಿಗೆ ಉಪಯುಕ್ತವಾಗಿವೆ.ಈ ಕುರಿತು ಲೀಡ್ ಬ್ಯಾಂಕ್ ಅಧಿಕಾರಿಗಳು ವಿಶೇಷ ಅಭಿಯಾನದ ಮೂಲಕ ಅರಿವು ಮತ್ತು ಪ್ರೋತ್ಸಾಹ ನೀಡಬೇಕು. ಸರ್ಕಾರದ ಪ್ರತಿ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳೂ ಈ ಯೋಜನೆಗಳಡಿ ಬರುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

ಲೀಡ್ ಬ್ಯಾಂಕ್ ಮೂಲಕ ಮುದ್ರಾ ಯೋಜನೆಯಡಿ ಜಿಲ್ಲೆಯ ಜನಸಂಖ್ಯೆ ಗೆ ಅನುಗುಣವಾಗಿ ಸಾಲ ಸೌಲಭ್ಯ ಕಲ್ಪಿಸಬೇಕು. ಈವರೆಗೆ ಸಾಧಿಸಿದ ಪ್ರಗತಿ ವರದಿ ಜಿ.ಪಂ ಸಿಇಓ ಅವರಿಗೆ ನೀಡಿ ಎಷ್ಟು ಜನ ಫಲಾನುಭವಿಗಳು ಈ ಯೋಜನೆಯಡಿ ಲಾಭ ಪಡೆದಿದ್ದಾರೆ ಎಂಬುದರ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದರು. ಅದರಂತೆ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಲೀಡ್ ಬ್ಯಾಂಕ್ಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯ ಗಳ ಬಗ್ಗೆ ಪರಿಶೀಲಿಸಿ ನಿಖರ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ವಿಶೇಷ ಯೋಜನೆಗಳ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಗಮನ ನೀಡುವಂತೆ ಅವರು ಸೂಚನೆ ನೀಡಿ ಫಲಿತಾಂಶ ಕಡಿಮೆ ಕುರಿತು ಯಾವುದೇ ರೀತಿಯ ಕಾರಣಗಳನ್ನು ನೀಡದೆ ಪರಿಣಾಮಕಾರಿ ಯೋಜನೆ ರೂಪಿಸಲು ಅವರು ಸೂಚಿಸಿದರು.

ಕಡಿಮೆ ತೂಕದ ಶಿಶುಗಳ ಜನನವನ್ನು ಶೇಕಡಾವಾರು ಕಡಿಮೆ ಮಾಡುವಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ಕ್ರಮಗಳು, ಅಪೌಷ್ಠಿಕತೆ ನಿವಾರಣೆ, ಐಸಿಡಿಎಸ್ ಕಾರ್ಯಕ್ರಮದ ಅಡಿಯಲ್ಲಿ ನಿಯಮಿತವಾಗಿ ಪೂರಕ ಪೌಷ್ಟಿಕಾಂಶವನ್ನು ಪಡೆಯುವ ಮಹಿಳೆಯರ ಸಂಖ್ಯೆ ಮತ್ತು ರೋಗಿಗಳಿಗೆ ಒದಗಿಸಲಾದ ಪ್ರೋಟೀನ್-ಭರಿತ ಆಹಾರಗಳ ಕುರಿತು, ಶಿಕ್ಷಣ, ಕೃಷಿ ಮತ್ತು ಜಲಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಮೂಲಭೂತ ಮೂಲಸೌಕರ್ಯಗಳಂತಹ ಪ್ರಮುಖ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಮತ್ತು ಸವಾಲುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಇದಕ್ಕೂ ಮುನ್ನ ಅವರು ದೋರನಹಳ್ಳಿ ಅಂಗನವಾಡಿ ,ಹಾಗೂ ನಾಯ್ಕಲ್ ಗ್ರಾಮದ ಗ್ರಂಥಾಲಯ, ಪರಿಶೀಲಿಸಿದರು. ಈ ಭೇಟಿ ವೇಳೆ ಹಾಗೂ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಹಾಗೂ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!