ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸುವ ಸುದ್ದಿ ಇದು…
ಆಕಸ್ಮಿಕ ಅಗ್ನಿ ಅನಾಹುತ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಜಲವಾಹನದ ಕೊರತೆ | ಶಹಾಪುರಕ್ಕೆ ಬೇಕಿದೆ ಹೆಚ್ಚಿನ ವಾಹನ | ಗುರುಮಠಕಲ್ ನಲ್ಲಿಯೂ ಸೇವೆ ಆರಂಭಿ ಸುವುದು ಸೂಕ್ತ
ಯಾದಗಿರಿ : ಬೇಸಿಗೆ ಆರಂಭಕ್ಕೂ ಮುನ್ನ ಶಹಾಪುರ ಅಗ್ನಿ ಶಾಮಕ ಠಾಣೆಯು ಜಲವಾಹನದ ಕೊರತೆ ಎದುರಿಸುತ್ತಿದ್ದು, 500 ಲೀ.ನ ಸಣ್ಣ ವಾಹನದಲ್ಲೇ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಗೆ ಎದುರಾಗಿದೆ. ಅಲ್ಲದೇ ಜಿಲ್ಲೆಯ ಗಡಿ ಭಾಗ ಗುರುಮಠಕಲ್ ತಾಲೂಕಿನಲ್ಲಿ ತುರ್ತು ಸಂದರ್ಭದಲ್ಲಿ ಅಗ್ನಿ ಅವಘಡ ತಡೆಯಲು ಯಾದಗಿರಿಯಿಂದ ವಾಹನ ಬರುವವರೆಗೆ ಕಾಯುವ ಅನಿವಾರ್ಯತೆ ಇದೆ.
ಉಭಯ ನಗರಗಳು ಬೆಳೆಯುತ್ತಿದ್ದು, ಇನ್ನೇನು ಬೇಸಿಗೆ ಆರಂಭಕ್ಕೂ ಮುನ್ನವೇ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದೆ. ಬಿರು ಬಿಸಿಲಿನ ಝಳಕ್ಕೆ ಸಂಭವಿಸುವ ಅಗ್ನಿ ಅವಘಡಗಳಿಗೆ ಬೆಂಕಿ ನಂದಿಸುವ ಕಾರ್ಯ ಮಾಡಬೇಕಿರುವ ಶಹಾಪುರ ಅಗ್ನಿಶಾಮಕ ಠಾಣೆಯಲ್ಲಿ ಬರೀ 500 ಲೀಟರ್ ಸಾಮರ್ಥ್ಯವಿರುವ ಸಣ್ಣ ವಾಹನವಿರುವುದು ಶೋಚನಿಯ ಸಂಗತಿಯಾಗಿದೆ.
ಸುಮಾರು 50-60 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬೇಕಾದ ಶಹಾಪುರ ಅಗ್ನಿಶಾಮಕ ಠಾಣೆ, ಈಗ ಕೇವಲ ೫೦೦ ಲೀ. ನ ಸಣ್ಣ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಪ್ರತಿದಿನ ೫-೬ ಕರೆಗಳನ್ನು ಸ್ವೀಕರಿಸುವ ಸಿಬ್ಬಂದಿ ಒಂದು ವಾಹನವನ್ನು ಹಿಡಿದುಕೊಂಡು ಎಲ್ಲಿಗೆ ಹೋಗಬೇಕೆಂಬ ಗೊಂದಲ ಹಾಗೂ ಸಂಕಷ್ಟದಲ್ಲಿದ್ದಾರೆ.
ಇರುವ ಒಂದು ಜಲ ವಾಹನ ದೂರದ ಹಳ್ಳಿಯಲ್ಲಿನ ಜಮೀನಿಗೆ ಬಿದ್ದ ಬೆಂಕಿಯನ್ನು ಶಮನ ಮಾಡಲು ಹೋದರೆ, ಇತ್ತ ಬೇರೆ ಬೇರೆ ಯಾವುದೇ ಹಳ್ಳಿಯಲ್ಲಿ ಗಂಭೀರ ದುರ್ಘಟನೆ ಸಂಭವಿಸಿದರೂ ಬೆಂಕಿ ನಂದಿಸಲು ವಾಹನ ಇಲ್ಲದ ಪರಿಸ್ಥಿತಿ ಠಾಣೆಯ ಸಿಬ್ಬಂದಿಯದ್ದಾಗಿದೆ.
ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಕಡೆ ಅಗ್ನಿ ಅವಘಡಗಳು ಸಂಭವಿಸಿದರೆ ಅದನ್ನು ನಿಭಾಯಿಸಲು ಇಲ್ಲಿನ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುವಂತಾಗಿದ್ದು, ಅಲ್ಲದೇ ಇನ್ನೇನು ಬೇಸಿಗೆ ಆರಂಭವಾಗಲಿದ್ದು ಪರಿಸ್ಥಿತಿ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ.
ಅಧಿಕ ಜನಸಂಖ್ಯೆ ಹೊಂದಿರುವ ನಗರದಲ್ಲಿ 45 ಸಾವಿರ ಲೀಟರ್ ಸಾಮರ್ಥ್ಯದ ಎರಡು ಜಲವಾಹನಗಳ ಅಗತ್ಯವಿದ್ದು, ಅಗ್ನಿ ನಂದಕ ವಾಹನದ ಕೊರತೆ ನೀಗಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಆಡಳಿತಾಧಿಕಾರಿಗಳು ಮುಂದಾಬೇಕಿದೆ. ಇದರಿಂದ ಸಾರ್ವಜನಿಕ ಹಾನಿಯನ್ನು ತಪ್ಪಿಸಲು ಸಹಕಾರವಾಗಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಗಡಿ ಭಾಗದ ಜನರಿಗೆ ತುರ್ತು ಸೇವೆಗಳ ಒದಗಿಸಲು ಸರ್ಕಾರ ಮುಂದಾಗಬೇಕು. ಅಗ್ನಿ ಶಾಮಕ ಠಾಣೆ ಕುರಿತು ಸಾಕಷ್ಟು ಬಾರಿ ಮನವಿಯೂ ಸಲ್ಲಿಸಲಾಗಿತ್ತು. ಬೇಸಿಗೆ ಆರಂಭ ಆಗುತ್ತಿದ್ದು, ಗುರುಮಠಕಲ್ ಗೆ ಪ್ರತ್ಯೇಕ ವಾಹನ ಇಟ್ಟು ನಿರ್ವಹಣೆ ಮಾಡಲಿ. – ನಾಗೇಶ್ ಗದ್ದಿಗೆ, ಕನ್ನಡ ಪರ ಸಂಘಟನೆ ಪ್ರಮುಖ.
ಗಡಿಯಲ್ಲಿ ಇಲ್ಲ ಅಗ್ನಿ ಶಾಮಕ ಠಾಣೆ, ಯಾದಗಿರಿಯಿಂದ ಬರೋ ವರೆಗೆ ಕಾಯಲೇಬೇಕು…!: ಇನ್ನು ಗುರುಮಠಕಲ್ ಕಥೆಯೇ ಬೇರೆ. ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ಸುಮಾರು ವರ್ಷಗಳು ಕಳೆದರೂ ಸಮರ್ಪಕ ಕಚೇರಿಗಳಿಲ್ಲದೇ ನಿತ್ಯ ಜನರ ಯಾತನೆ ತಪ್ಪಿಲ್ಲ. ಇನ್ನು ತುರ್ತು ಸೇವೆಯಾದ ಅಗ್ನಿ ಶಾಮಕ ಠಾಣೆ ಗಗನ ಕುಸುಮವಾಗಿದೆ.
ಈ ಭಾಗದಲ್ಲಿ ಏನೇ ಅವಘಡ ಸಂಭವಿಸಿದರೆ, ಯಾದಗಿರಿ ಯಿಂದ ವಾಹನ ಬರುವವರೆಗೆ ಕಾಯುವುದು ಅನಿವಾರ್ಯ ವಾಗಿದೆ. ಸುಮಾರು 40ಕಿ.ಮೀ. ಕ್ರಮಿಸಿ ವಾಹನ ಬರಬೇಕಿರುವುದು ತುರ್ತು ಸಂದರ್ಭದಲ್ಲಿ ಸಾಕಷ್ಟು ಹಾನಿ ಸಂಭವಿಸುವ ಸಾಧ್ಯತೆಗಳಿವೆ.
ಕಳೆದ ಕೆಲ ವರ್ಷದ ಹಿಂದೆ ಕಟ್ಟಿಗೆ ಮಿಲ್ ಮತ್ತು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಗ್ನಿ ದುರಂತ ಸಂಭವಿಸಿ, ವಾಹನ ಬರುವಷ್ಟರಲ್ಲಿ ಸಂಪೂರ್ಣ ಅಗ್ನಿಗೆ ಆಹುತಿಯಾಗಿದ್ದು ಸ್ಮರಣೀಯ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ವಹಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ರೈತರ ಜಮೀನಿನಲ್ಲಿ ಬೇಸಿಗೆ ವೇಳೆ ಸಂಭವಿಸುವ ಅಗ್ನಿ ಅವಘಡಗಳು ಹೆಚ್ಚು, ಹೀಗಾಗಿ ಇಲ್ಲಿನ ಅಗ್ನಿಶಾಮಕ ಠಾಣೆಗೆ ದೊಡ್ಡ ವಾಹನಗಳು ಅವಶ್ಯ ಜರೂರಿಯಾಗಿದೆ. ಕೂಡಲೇ ಸರ್ಕಾರ ತಾಲೂಕಿಗೆ ಬೆಂಕಿ ನಂದಿಸುವ ಜಲವಾಹನಗಳನ್ನು ಕಲ್ಪಿಸಬೇಕಿದೆ. – ರಾಘವೇಂದ್ರ ನರಸನಾಯಕ, ರೈತ.
ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ನಿರ್ವಹಣೆಗೆ ಅವಶ್ಯವಿರುವ ಕುಡಿಯುವ ನೀರಿನ ಸಮಸ್ಯೆ ಎಷ್ಟು ಮುಖ್ಯವೊ ಅಗ್ನಿ ನಂದಕ ವಾಹನ ಅಷ್ಟೇ ಮುಖ್ಯ. ಈ ಬಗ್ಗೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾಗಿ ಪರಿಗಣಿಸಿ, ಮುತುರ್ಜಿವಹಿಸಿ ಸರ್ಕಾರದಿಂದ ಶೀಘ್ರವೇ ಅಗ್ನಿಶಾಮಕ ಇಲಾಖೆಗೆ ಜಲವಾಹನ ಒದಗಿಸಿಕೊಡಬೇಕು. – ಪ್ರದೀಪ ಅಣಬಿ,ಅಧ್ಯಕ್ಷರು, ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ.
