ಯಾದಗಿರಿ: ಭಗವಾನ್ ಮಹಾವೀರರು ಮನುಕುಲವನ್ನು ಉದ್ಧಾರ ಮಾಡಿದ ಮಹಾನ್ ಚೇತನ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.

ನಗರದ ಚಕ್ರಕಟ್ಟಾ ರಸ್ತೆಯ ಮಹಾವೀರ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭಗವಾನ ಮಹಾವೀರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾವೀರರ ವಿಚಾರಧಾರೆಗಳು ಸರ್ವರಿಗೂ ಸಮಬಾಳು, ಸಮಪಾಲು ನೀಡುವ ಸರ್ವೋದಯದ ಧರ್ಮತೀರ್ಥ ದಂತಿತ್ತು ಎಂದರು. ಹುಟ್ಟಿನಿಂದ ಯಾರು ಮೇಲಲ್ಲ, ಕೀಳಲ್ಲ. ತನ್ನ ಕಾಯಕದಿಂದ ಉತ್ತಮ ಅಥವಾ ಕನಿಷ್ಠನಾಗುತ್ತಾನೆಂಬ ಮಾತಿನಂತೆಯೇ ಮನಸ್ಸು, ವಚನ, ಕಾಯಕ ಶುದ್ಧಿಯಿಂದ ಆತ್ಮ ಸುಸಂಕೃತ ವಾಗುವುದೆಂಬ ದಿವ್ಯ ಮಂತ್ರ ಹೇಳಿಕೊಟ್ಟ ಮಾನವ ಸಮಾಜ ಮಹಾಬೆಳಕಾಗಿದ್ದಾರೆ ಎಂದು ಹೇಳಿದರು.

‘ತತ್ವಜ್ಞಾನ ವಿಹಿನಾನಮ್ ದುಃಖ್ಖಮೇವ ಶಾಶ್ವತಮ್’ ಅಂದರೇ ಪರಿಪೂರ್ಣವಾದ ಜ್ಞಾನವು ಆತ್ಮವನ್ನು ಸುಖಿಯನ್ನಾಗಿ ಇಡಬಲ್ಲದು ಎಂಬುವುದನ್ನು ಸಿದ್ದಭಗವಂತರಾಗಿ ಅಮರ ಸಂದೇಶ ನೀಡಿದ ಭಗವಾನ್ ಮಹಾವೀರರ ತತ್ವಗಳನ್ನು ಪಾಲಿಸಬೇಕೆಂದು ಎಸ್.ಪಿ. ಪ್ರಥ್ವಿಕ್ ಶಂಕರ್ ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಶಾಂತಿ, ಸಹನೆ, ತಾಳ್ಮೆ ಜೀವನದ ಮಂತ್ರಗಳಾಗಬೇಕು. ಆ ಮೂಲಕ ಪರೋಪಕಾರ ಜೀವನ ಸಾಗಿಸಬೇಕೆಂಬ ಸಂದೇಶವನ್ನು ಭಗವಾನ್ ಮಹಾವೀರರು ನೀಡಿದ್ದಾರೆ. ಕಾರಣ ಎಲ್ಲರೂ ಅವರ ಬದುಕಿನ ಆದರ್ಶಗಳನ್ನು ಪಾಲಿಸೋಣ ಎಂದರು.

ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ರಮೇಶ ಬಡಿಗೆರ ಅವರು ಧರ್ಮಸಂಕಷ್ಟದಿಂದ ಪಾರು ಮಾಡಲು ಆಗಾಗ ಈ ಭೂಮಿಗೆ ಧರ್ಮಾತ್ಮ ರು ಅವತರಿಸಿ ಬರುತ್ತಾರೆ ಎಂಬ ವಾಣಿಯಂತೆಯೇ ಭಗವಾನ ಮಹಾವೀರರು ಹುಟ್ಟಿ ಬಂದು ಜನರನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವ ಮೂಲಕ ಮಾನವ ಸಮಾಜದ ಬೆಳಕಾಗಿದ್ದಾರೆಂದರು.

ಬಿಹಾರ ರಾಜ್ಯದ ವೈಶಾಲಿ ನಗರದ ಕುಂಡ ಗ್ರಾಮದಲ್ಲಿ ರಾಜಸಿದ್ಧಾರ್ಥ ಮತ್ತು ತ್ರಿಶಾಲೆ ದಂಪತಿ ಮಗನಾಗಿ ಜನಸಿದ ಇವರಿಗೆ ವರ್ಧಮಾನ ಎಂಬ ಹೆಸರು ನಾಮಕರಣ ಮಾಡುತ್ತಾರೆ. ಬಾಲಕನಿದ್ದಾಗಲೇ ಆಟ, ಪಾಠಗಳಲ್ಲಿ ಬುದ್ದಿವಂತರಾಗಿದ್ದರು, ಜೀವಿಗಳು ಕಷ್ಟ ಪಡಲು ಕಾರಣ ಹುಡುಕುವ ದಾರ್ಶನಿಕರಾಗಿ, ಒಬ್ಬರಿಗೊಬ್ಬರು ಸಹಕಾರ ಮಾಡುವುದು ಮಾನವರ ಕರ್ತವ್ಯವಾಗಬೇಕೆಂಬ ಸಂದೇಶ ಸಾರಿದರೆಂದು ಬಡಿಗೆರ ಹೇಳಿದರು.

ಜೈನ ಸಮಾಜದ ಸನ್ಯಾಸತ್ವ ಸ್ವೀಕಾರ ಮಾಡಲಿರುವ ನಿಕಿತಾ ಗಾಂಧಿ ಮಾತನಾಡಿ, ಭಗವಾನ ಮಹಾವೀರರು ಅಮೂಲ್ಯವಾದ ಜೀವನ ಮೌಲ್ಯಗಳನ್ನು ಕೊಟ್ಟಿದ್ದಾರೆ. ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ಡಿವೈಎಸ್ ಪಿ ಅರುಣ ಕುಮಾರ್, ಕನ್ನಡ ಮತ್ತು ‌ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಜೈನ ಸಮಾಜದ ಮುಖಂಡರಾದ ಮಾರಾಸಮಲ್ ಜೈನ್, ಬಾಬು ದೋಖಾ, ಗೌತಮಚಂದ ದೋಖಾ, ಕಾಂತಿಲಾಲ‌ ದೋಖಾ, ವಿನೋದ‌ ಬಭಂಡಾರಿ, ಸುರೇಶ ಜೈನ್, ಗೌತಮ್ ಚಿಂದಿ ಜೈನ್, ಉಪಸ್ಥಿತರಿದ್ದರು. ಗುರುಪ್ರಸಾದ್ ವೈದ್ಯ ನಿರೂಪಿಸಿ, ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!