ಬೇಕಾಬಿಟ್ಟಿ ಕಾಮಗಾರಿ | 1162 ಮನೆಗಳಿಗೆ ನೀರು ಸಂಪರ್ಕ ಗುರಿ | 4 ವರ್ಷ ಕಾಮಗಾರಿ ನಿರ್ವಹಣೆ
ಗುರುಮಠಕಲ್: ತಾಲ್ಲೂಕಿನ ಯಲ್ಲೇರಿ ಗ್ರಾಮದಲ್ಲಿ ಜೆ.ಜೆ.ಎಂ. ಯೋಜನೆಯಡಿ ನಡೆದಿರುವ ಕಾಮಗಾರಿ ಸಂಪೂರ್ಣ ಕಳಪೆ ಪ್ರಮಾಣದಲ್ಲಿದ್ದು, ಕಾಮಗಾರಿ ಪೂರ್ಣಗೊಳ್ಳದೇ ಪಿಡಿಓ ರವರು ಈ ಕಾಮಗಾರಿಯನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಿಕೊಂಡಿದ್ದು, ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಕರವೇ ತಾಲೂಕು ಘಟಕ ಒತ್ತಾಯಿಸಿ ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಯಲ್ಲೇರಿ ಗ್ರಾಮದಲ್ಲಿ ಜೆ.ಜೆ.ಎಂ. ಯೋಜನೆಯಡಿ ನಡೆದಿರುವ ಕಾಮಗಾರಿ ಅಂದಾಜು ಪತ್ರಿಕೆ ಪ್ರಕಾರ ಮಾಡದೇ, ಬೇಕಾಬಿಟ್ಟಿ ಕಾಮಗಾರಿ ಮಾಡಿದ್ದು, ಯಲ್ಲೇರಿ ಗ್ರಾಮದ 1162 ಮನೆಗಳಿಗೆ ನಳಗಳ ಸಂಪರ್ಕ ಕಲ್ಪಿಸುವ ಕಾಮಗಾರಿ ಅಂದಾಜು ಮೊತ್ತ 174.30 ಲಕ್ಷ, ಕರಾರು ಮೊತ್ತ ರೂ. 170.22 ಲಕ್ಷ ಇದ್ದು, ಕಾರ್ಯಾದೇಶ ನೀಡಿದ ದಿ:19-04-2021 ಇದ್ದು, ಕಾಮಗಾರಿ ಪ್ರಾರಂಭಗೊಂಡಿದ್ದು, ಸುಮಾರು 4 ವರ್ಷಗಳ ಕಾಲ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತೋರಿಕೆಗೆ ತೋರಿಸಿ. ಕಾಮಗಾರಿ ಪ್ರಗತಿ ಹಂತದಲ್ಲಿರುವಾಗ ಗ್ರಾ.ಪಂ. ಅಧಿಕಾರಿಗಳಿಗೆ ಈ ಕಾಮಗಾರಿಯೂ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಕಾಮಗಾರಿ ಪೂರ್ಣಗೊಳ್ಳುವ ವರೆಗೂ ಗ್ರಾ.ಪಂ.ಗೆ ಹಸ್ತಾಂತರ ಮಾಡಿಕೊಳ್ಳಬೇಡಿ ಎಂದು ದೂರು ನೀಡಲಾಗಿತ್ತು.
ತದನಂತರ 2 ವರ್ಷಗಳ ನಂತರ ಯಾವುದೇ ಕೆಲಸ ಪೂರ್ಣಗೊಳಿಸದೇ ಗುತ್ತಿಗೆದಾರರು ಸರ್ಕಾರದ ಹಣ ಲೂಟಿ ಮಾಡಲು ಕಳಪೆ ಗುಣಮಟ್ಟದ ಕಾಮಗಾರಿ ಯನ್ನು ಮಾಡಿ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಇದರ ಬಗ್ಗೆ ಗ್ರಾಮಸ್ಥರು ಹಲವಾರು ಬಾರಿ ಜೆ.ಇ, ಎ.ಇ.ಇ. ಗಮನಕ್ಕೆ ತಂದಿರುತ್ತಾರೆ. ಅದರೂ ಕೂಡಾ ಗ್ರಾ.ಪಂ ಪಿಡಿಓ ರವರು ಏಕಾಏಕಿ ಯಾರಿಗೂ ಗೊತ್ತಿಲ್ಲದೇ ಹಾಗೂ ಆ ವಾರ್ಡಗಳ ಸದಸ್ಯರಿಗೂ ಕೂಡಾ ಗಮನಕ್ಕೆ ತರದೇ ಮತ್ತು ಗ್ರಾಮಸಭೆಯನ್ನು ಕರೆಯದೇ ಅವರೇ ನಿರ್ಧಾರ ತೆಗೆದುಕೊಂಡು ಹಸ್ತಾಂತರ ಮಾಡಿಕೊಂಡಿರುತ್ತಾರೆ ಎಂದು ತಾ. ಅಧ್ಯಕ್ಷ ಶರಣಬಸಪ್ಪ ಎಲ್ಹೇರಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದನ್ನು ಹಸ್ತಾಂತರ ಮಾಡಿಕೊಂಡಿದ್ದೀರಿ ಎಂದು ಕೇಳಿದಾಗ ಇನ್ನೂ ಹಸ್ತಾಂತರ ಮಾಡಿಕೊಂಡಿಲ್ಲ ಎಂದು ಪಿಡಿಓ ಸುಳ್ಳು ಹೇಳುತ್ತಿದ್ದಾರೆ. 3ನೇ ತನಿಖಾ ತಂಡದವರು ಕೂಡಾ ಸುಳ್ಳು ವರದಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಸ್ತುತ ಕಾಮಗಾರಿ ಕಳಪೆ ಹಂತದಲ್ಲಿದ್ದು, ಆದ ಕಾರಣ ಈ ಕಾಮಗಾರಿಯ ತನಿಖೆ ನಡೆಸಿ ಮತ್ತು ಪಿಡಿಓ ರವರು ಗುತ್ತಿಗೆದಾರರ ಜೊತೆ ಸೇರಿ ಹಣವನ್ನು ಲೂಟಿ ಮಾಡಿರುತ್ತಾರೆಂದು ಅನುಮಾನವಿದೆ. ಸಂಪೂರ್ಣ ತನಿಖೆ ಮಾಡಿ, ತನಿಖಾ ತಂಡವನ್ನು ರೂಪಿಸಿ 1162 ಮನೆಗಳ ನಳಗಳ ವೀಕ್ಷಣೆ ಮಾಡಬೇಕು, ಪಿಡಿಓ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
