ಪುರಸಭೆಯಲ್ಲಿ ಬಿ – ಖಾತಾ ನೋಂದಣಿ ಪ್ರಕ್ರಿಯೆ ವಿಳಂಭ ?| ಈವರೆಗೆ 690 ನಿವೇಶನ ನೋಂದಣಿ | ಅಕ್ರಮ ಕಬ್ಜಾ ಮಾಡಿದವರು ನೋಂದಣಿಗೆ ದುಂಬಾಲು | ತನಿಖೆಗೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ದೂರು ನೀಡಲು ಸಿದ್ಧತೆ
ಗುರುಮಠಕಲ್ : ದೇವರು ವರ ಕೊಟ್ರು, ಪೂಜಾರಿ ಕೊಡಲಿಲ್ಲ ಎನ್ನುವ ಪರಿಸ್ಥಿತಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪುರಸಭೆ ವ್ಯಾಪ್ತಿಯ ಜನರಿಗೆ ಕಾಡುತ್ತಿದೆ. ಅರ್ಹರು ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಇದರಲ್ಲಿ ನಮ್ಮದು ಆಗಲಿ ಎಂದು ಅಕ್ರಮ ಕಬ್ಜಾದಾರರು ಅಧಿಕಾರಿಗಳ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸರ್ಕಾರ ನಗರ ಪ್ರದೇಶ ವ್ಯಾಪ್ತಿಯಲ್ಲಿ ಅನಧಿಕೃತ ಸ್ವಯಂ ಆಸ್ತಿಗಳಿಗೆ ಬಿ- ಖಾತಾ ಪಡೆಯಲು ಅವಕಾಶ ನೀಡಿದ್ದು, ಜನರಿಗೆ ಒಂದೆಡೆ ಅನುಕೂಲವಾಗಿದೆ. ಇನ್ನೊಂದೆಡೆ ಮೂರನೆ ವ್ಯಕ್ತಿಗಳೇ ಶಾಮೀಲಾಗಿ ಜನರಿಂದ ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಜನರ ಆರೋಪ.
ಗುರುಮಠಕಲ್ ವ್ಯಾಪ್ತಿಯಲ್ಲಿ 2200 ರಷ್ಟು ನಿವೇಶನಗಳು ಬಿ- ಖಾತೆ ಪಡೆಯಲು ಅರ್ಜಿಗಳ ಸಲ್ಲಿಸಿದ್ದಾರೆ. ಇವುಗಳಲ್ಲಿ ಫೆ.18ರಿಂದ ಈವರೆಗೆ 690 ಬಿ-ಖಾತೆ ನೋಂದಣಿ ಮಾಡಲಾಗಿದೆ ಎಂದು ಪುರಸಭೆಯಿಂದ ಮಾಹಿತಿ ಲಭ್ಯವಾಗಿದೆ.
ಬಿ ಖಾತಾ ನೋಂದಣಿಗೆ ತೆರಿಗೆ , ಶುಲ್ಕ ಪಾವತಿ ಜೊತೆ ಇಂತಿಷ್ಟು ಹಣ ನಿಗದಿ ಮಾಡಲಾಗಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅದು ಯಾರ್ಯಾರಿಗೆ ಮುಟ್ಟಬೇಕು ಅವರಿಗೆ ಮುಟ್ಟಿದ್ರೆ ಕೆಲಸ ಸುಲಭ ಇಲ್ಲಾಂದ್ರೆ ನಿಮ್ ಕೆಲಸಕ್ಕೆ ಅಲೆದಾಡಿ ತಲೆ ಹಿಡ್ಕೊಂಡು ಕೂಡುವುದು ಅಷ್ಟೇ.
ನೋಂದಣಿಗೆ ಆನ್ ಲೈನ್ ಅರ್ಜಿ ಸಲ್ಲಿಸಿ, ಎಲ್ಲಾ ದಾಖಲೆ ಸರಿಯಾಗಿದ್ದರೆ ಯಾವುದೇ ತೊಂದರೆ ಇಲ್ಲ. ಕೆಲ ಕೆಲಸಕ್ಕೆ ಪ್ರಭಾವಿ ಮೂರನೇ ವ್ಯಕ್ತಿಗಳ ಮೂಲಕ ಹೋದ್ರೆನೇ ಕೆಲಸ ಪಕ್ಕಾ… ! ಎನ್ನುವ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನುವುದು ಜನರ ಗೋಳು. ಸಂಬಂಧಪಟ್ಟ ಅಧಿಕಾರಿಗಳು ಜನರ ಕೆಲಸ ನ್ಯಾಯಯುತವಾಗಿ ಸಾಗಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಅಕ್ರಮ ನೋಂದಣಿಗೆ ಅಧಿಕಾರಿಗಳ ಮೇಲೆ ಒತ್ತಡ ?: ಗುರುಮಠಕಲ್ ಪುರಸಭೆ ವ್ಯಾಪ್ತಿಯ ಕೆಲ ವರ್ಷಗಳ ಹಿಂದೆ ಅಕ್ರಮವಾಗಿ ಸಾರ್ವಜನಿಕರ ಸ್ಥಳ, ಗಾರ್ಡನ್ ಗೆ ಮೀಸಲಿರುವ ಜಾಗ ಕಬ್ಜಾ ಮಾಡಿದ ಮುಟೇಷನ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ 7 ಜನರ ಮೇಲೆ ಕ್ರಮವಾಗಿತ್ತು. ಇದೀಗ ಕೆಲ ಪ್ರಭಾವಿ ವ್ಯಕ್ತಿಗಳು ಅರ್ಹವಲ್ಲದ ನಿವೇಶನಗಳಿಗೂ ಬಿ ಖಾತೆ ನೀಡಲು ಪ್ರಭಾವಿ ರಾಜಕಾರಣಿಗಳಿಂದ ಒತ್ತಡ ಹಾಕಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಸಚಿವರ ಗಮನಕ್ಕೆ ತಂದಿದ್ದ ಪತ್ರಕರ್ತರು : ಪೌರಾಡಳಿತ ಸಚಿವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸಿದ ವೇಳೆ ಪತ್ರಕರ್ತರು ಬಿ ಖಾತೆ ವಿಷಯ ಸಚಿವರ ಗಮನಕ್ಕೆ ತಂದಿದ್ದರು.
ಬಿ-ಖಾತೆಗಾಗಿ ಜನರಿಂದ ಮೂರನೇ ವ್ಯಕ್ತಿಗಳಿಂದ ವಸೂಲಿಗಾಗಿ ಉದ್ದೇಶ ಪೂರ್ವಕ ವಿಳಂಭ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ದೂರು ನೀಡಲಾಗುವುದು. ಜನರಿಗೆ ನ್ಯಾಯ ದೊರಕಿಸಲು ಹೋರಾಡಲಾಗುವುದು – ಮಹಾದೇವಪ್ಪ ಚಪೆಟ್ಲಾ, ಆಲ್ ಇಂಡಿಯಾ ಬಹುಜನ ಪಾರ್ಟಿ ಅಸೆಂಬ್ಲಿ ಅಧ್ಯಕ್ಷ.

ಬಿ-ಖಾತೆಗಾಗಿ ಜನರಿಂದ ಮೂರನೇ ವ್ಯಕ್ತಿಗಳಿಂದ ವಸೂಲಿಗಾಗಿ ಉದ್ದೇಶ ಪೂರ್ವಕ ವಿಳಂಭ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ದೂರು ನೀಡಲಾಗುವುದು. ಜನರಿಗೆ ನ್ಯಾಯ ದೊರಕಿಸಲು ಹೋರಾಡಲಾಗುವುದು – ಮಹಾದೇವಪ್ಪ ಚಪೆಟ್ಲಾ, ಆಲ್ ಇಂಡಿಯಾ ಬಹುಜನ ಪಾರ್ಟಿ ಅಸೆಂಬ್ಲಿ ಅಧ್ಯಕ್ಷ.