ಡಾ. ಅಂಬೇಡ್ಕರ್ ಭವನಕ್ಕೆ ಮೀಸಲಾಗಿದ್ದ ಸ್ಥಳ | ಆ ಸ್ಥಳದಲ್ಲಿ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ | ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿನ್ನಾ ಕಾರ ಗ್ರಾಮದ ದಲಿತ ಸಮುದಾಯದ ಅಮಾಯಕರು ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾಗಿದ್ದಾರೆ.

ದಿನಸಿ ಅಂಗಡಿಗೆ ಖರೀದಿಗೆ ತೆರಳಿದ ವೇಳೆ ಕೊಡಲು ನಿರಾಕರಿಸಿದ ವಿಡಿಯೋ ತುಣುಕು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗ್ರಾಮದಲ್ಲಿ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಸಾಮಾಜಿಕ ಭವಿಷ್ಕಾರವನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಖಂಡಿಸಿದ್ದು, ಗ್ರಾಮಸ್ಥರು ಹಾಗೂ ಪಕ್ಷದಿಂದ ಜಿಲ್ಲಾಡಳಿತಕ್ಕೆ ಕಾನೂನು ಕ್ರಮ ಕೈಗೊಳ್ಳಲು ದೂರು ಸಲ್ಲಿಸಿದ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿವರ: ಸರ್ಕಾರದ ಆದೇಶದಿಂದ ಸರ್ವೇ ನಂ. 458 ರಲ್ಲಿ ಮೀಸಲಾಗಿರುವ 6 ಗುಂಟೆ ಜಮೀನನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ಭವನ ಹಾಗೂ ಉದ್ಯಾನವನ ನಿರ್ಮಾಣಕ್ಕಾಗಿ ಮೀಸಲಾಗಿಸಿದ್ದು, ಈ ಜಮೀನಿನಲ್ಲಿ ಕೆಲವು ಸವರ್ಣ ಸಮುದಾಯದವರು ಬಲವಂತವಾಗಿ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಿಸಲು ಯತ್ನಿಸಿರುವುದು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಲಾಗಿದೆ.

ಅನ್ಯಾಯವನ್ನು ಪ್ರಶ್ನಿಸಿದ ಕಾರಣಕ್ಕೆ ಜೂನ್ 21 ರಿಂದ ದಲಿತ ಸಮುದಾಯದ ಮೇಲೆ ಸಾಮಾಜಿಕ ಬಹಿಷ್ಕಾರ ವಿಧಿಸಿ, ಚಹಾ ಅಂಗಡಿಯಲ್ಲಿ ಸೇವೆ ನಿರಾಕರಣೆ, ಕ್ಷೌರಿಕ ಸೇವೆ ನಿರಾಕರಣೆ, ಕಿರಾಣಿ ಅಂಗಡಿಗಳಲ್ಲಿ ದಿನಸಿ ವಸ್ತು ನೀಡದಿರುವುದು, ಜಮೀನಿನಲ್ಲಿ ಕೂಲಿ ಕೆಲಸ ನೀಡದಿರುವುದು, ಪಶುಗಳನ್ನು ಬಿಡದಿರುವುದು, ದೇವಾಲಯಗಳಲ್ಲಿ ಪ್ರವೇಶ ನಿರಾಕರಣೆ, ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಲು ಅಡ್ಡಿಯುಂಟು ಮಾಡಿರುವುದು ಹೀಗೆ ಅಮಾನವೀಯತೆ ಮೆರೆದು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಘಟನೆಗಳನ್ನು ತಕ್ಷಣ ನಿಯಂತ್ರಿಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಮಾನವೀಯತೆ ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಗ್ರಾಮದ ಪೀಡಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು, ದಲಿತ ಸಮುದಾಯದ ಜೀವ ಭದ್ರತೆ ಮತ್ತು ಮಾನವೀಯ ಹಕ್ಕುಗಳನ್ನು ಕಾಪಾಡುವುದು, ಸಾಮಾಜಿಕ ಬಹಿಷ್ಕಾರವನ್ನು ತಕ್ಷಣ ರದ್ದುಗೊಳಿಸುವಂತೆ ಕ್ರಮ ಕೈಗೊಳ್ಳುವುದು, ಇಂತಹ ಪ್ರಕಣಗಳು ಮರುಕಳಿಸದಂತೆ ಕ್ರಮ ವಹಿಸಲು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!