ಶ್ರೀ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯಿಂದ ವಿಶೇಷ ಕಾರ್ಯಾಗಾರ | ಮಹಿಳೆಯರು ಪ್ರಜ್ಞಾವಂತರಾದಾಗ ಸಮಾನತೆ ಸಾಧ್ಯ: ಡಾ.ರಿಜ್ವಾನಾ

ಯಾದಗಿರಿ: ಮಹಿಳೆಯರು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರಜ್ಞಾವಂತರಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ರಿಜ್ವಾನಾ ಅಫ್ರೀನ್ ಹೇಳಿದರು.

ಶ್ರೀ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗಾಗಿ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಮಹಿಳೆಯರು ಅರಿವಿನ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಿದರೆ, ನಗರ ಪ್ರದೇಶದ ಮಹಿಳೆಯರು ಕೆಲಸದ ಒತ್ತಡ ಹಾಗೂ ನಿರ್ಲಕ್ಷ್ಯ ದ ಕಾರಣದಿಂದ ಹಲವಾರು ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ ಎಂದರು. ಮಹಿಳೆಯರು ಕುಟುಂಬದ  ಆಧಾರ ಸ್ತಂಭವಾಗಿದ್ದು, ಮಹಿಳೆ ಸುಶೀಕ್ಷಿತರಾದರೆ ಇಡೀ ಕುಟುಂಬವೇ ಸಶಕ್ತವಾಗಿ ರೂಪುಗೊಳ್ಳುತ್ತದೆ ಎಂದರು.

ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಯ ಅರಿವನ್ನು ಅದರಲ್ಲೂ ಹೆಣ್ಣು ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸುವ ಮೂಲಕ ಅವರನ್ನು ಸಮರ್ಥವಾಗಿ ಬೆಳೆಸುವ ಜವಬ್ದಾರಿ ಮಹಿಳೆಯರ ಮೇಲಿದೆ.

ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಒತ್ತಡದ ಬದುಕು ಹಾಗೂ ನಿರ್ಲಕ್ಷ್ಯ ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.

ಹೆಣ್ಣು ಮಗು ಕನಿಷ್ಠ,ಗಂಡು ಮಗು ಶ್ರೇಷ್ಠ ಎಂಬ ಭಾವನೆ ಬಹುತೇಕ ಪಾಲಕರಲ್ಲಿ ಇಂದಿಗೂ ಇದೆ.ಹೆಣ್ಣು ಎಲ್ಲಾ ರೀತಿಯಲ್ಲಿ ಗಂಡಿಗೆ ಸರಿಸಮಾನವಾಗಿ, ಕೆಲವೊಮ್ಮೆ ಗಂಡಿಗಿಂತ ಮಿಗಿಲು ಎಂಬುದನ್ನು ಹಲವು ಸಂದರ್ಭಗಳಲ್ಲಿ ನಿರೂಪಿಸಿದ್ದು,ಜನಸಂಖ್ಯೆ ನಿಯಂತ್ರಣ ಕೂಡ ನಮ್ಮ ಸಾಮಾಜಿಕ ಜವಬ್ದಾರಿಯಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಡಾ.ಆರ್.ವೆಂಕಟರೆಡ್ಡಿ ಮಾತನಾಡಿ, ಮಹಿಳೆಯರು ದಿನನಿತ್ಯದ ಬದುಕಿನಲ್ಲಿ ಹತ್ತು ಹಲವು ಸಾಮಾಜಿಕ, ದೈಹಿಕ, ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು,ಅವುಗಳನ್ನು ಸಮರ್ಥವಾಗಿ ಸ ನಿರ್ವಹಿಸುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು.

ಮಕ್ಕಳು ಕೇವಲ ಅಂಕ ಗಳಿಸುವ ಸಾಧನಗಳಲ್ಲ.ಅವರ ಮೇಲೆ ನಮ್ಮೆಲ್ಲ ಯೋಚನೆಗಳನ್ನು ಒತ್ತಾಯಪೂರ್ವಕವಾಗಿ ಹೇರುವ ಬದಲು,ಅವರ ಅಭಿರುಚಿಯನ್ನು ಅರಿತು ಅವರ ಸರ್ವಾಂಗೀಣ ವ್ಯಕ್ತಿತ್ವ ವಿಕಾಸ ಮಾಡುವತ್ತ ಗಮನಹರಿಸಬೇಕು ಎಂದರು.

ಎಲ್ಲರನ್ನೂ ಆರೈಕೆ ಮಾಡುವ ಹೆಣ್ಣು ತನ್ನನ್ನು ತಾನು ಆರೈಕೆ ಮಾಡಿಕೊಳ್ಳಲು ಮರೆತಿದ್ದಾಳೆ.ಆರೋಗ್ಯವಂತ ಮಹಿಳೆಯರು ಮಾತ್ರ ಸಧೃಢ ಸಮಾಜ ನಿರ್ಮಾಣಕ್ಕೆ ಕಾರಣರಾಗಬಲ್ಲರು.ದೇಹ ಮತ್ತು ಮನಸ್ಸುಗಳನ್ನು ಸಮಾಧಾನ ಸ್ಥಿತಿಯಲ್ಲಿ ಇಟ್ಟುಕೊಳ್ಳುವತ್ತ ನಿಗಾ ವಹಿಸಬೇಕೆಂದು ಹೇಳಿದರು.

ಚಿಂತಕ ಪ್ರೊ.ಆರ್.ಕೆ.ಹುಡಗಿ ಮಾತನಾಡಿ, ಪರಂಪರಾಗತವಾಗಿ ನಮ್ಮಲ್ಲಿ ಜಿಡ್ಡುಗಟ್ಟಿರುವ ಮೌಡ್ಯತೆಯ ಕಾರಣದಿಂದ ಇಂದಿಗೂ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದು, ಅವುಗಳಿಂದ ಹೊರಬಂದು ನಾವು ಯಾರಿಗೂ ಕಡಿಮೆಯಿಲ್ಲ ಎಂದು ಧೈರ್ಯದಿಂದ ಮುನ್ನುಗ್ಗಿ ಬರಬೇಕು ಎಂದರು.

ಅಕ್ಕಮಹಾದೇವಿಯಂತಹ ದಿಟ್ಟ ಮಹಿಳೆ ಇಂದಿಗೆ 900 ವರ್ಷಗಳ ಹಿಂದೆಯೇ ತನ್ನ ಮೇಲಾಗುತ್ತಿರುವ ಶೋಷಣೆಯ ವಿರುದ್ಧ ರಾಜಸತ್ತೆಯನ್ನು ಧಿಕ್ಕರಿಸಿ ಲೋಕ ಸಂಚಾರ ಮಾಡಿ,ಆಧ್ಯಾತ್ಮಿಕ ತುತ್ತ ತುದಿಯನ್ನು ಏರಿದ ನೆಲ ನಮ್ಮದು.ಮಹಿಳೆಯರಿಗೆ ಅಕ್ಕ ಮಾದರಿ ಎಂದರು. ಶ್ರೀ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತನಾರತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಿದ್ಧರಾಜರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಧ್ಯೆಯೋದ್ದೇಶಗಳ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕು.ಪಲ್ಲವಿ ಪಾಟೀಲ ಅವರನ್ನು ಸಂಸ್ಥೆಯ ವತಿಯಿಂದ ವಿಶೇಷವಾಗಿ ಸತ್ಕರಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿ ವೇದಾ ಕರೆಡ್ಡಿ ಮಲ್ಹಾರ, ಶ್ರೀದೇವಿ ಪಾಟೀಲ ಚಾಮನಹಳ್ಳಿ, ಪೂರ್ಣಿಮಾ ಪಾಟೀಲ ತುನ್ನೂರ, ಡಾ.ಶೃತಿ ಹುನಕುಂಟಿ, ಸುರೇಖಾ ಪಾಟೀಲ ಚಟ್ನಳ್ಳಿ, ಡಾ.ಪ್ರೀತಿ ರೆಡ್ಡಿ, ಮಂಜುಳಾ ಪಾಟೀಲ, ದೀಪಾ ಪಾಟೀಲ ಬಂದಳ್ಳಿ, ಸಹನಾ ಪಾಟೀಲ ಕುರಕುಂದಿ, ಡಾ.ನೀಲಮ್ಮ ರೆಡ್ಡಿ, ಡಾ.ಜಯಲಕ್ಷ್ಮಿ ಆರ್ ಮುದ್ನಾಳ, ಶ್ವೇತಾ ಪಾಟೀಲ ಬಿಳ್ಹಾರ, ಡಾ.ಲಕ್ಷ್ಮೀ ಪಾಟೀಲ, ಡಾ.ಪ್ರೀತಿ ಪಾಟೀಲ, ಶಶಿಕಲಾ ಕ್ಯಾತ್ನಾಳ, ವಿದ್ಯಾ ಪಾಟೀಲ ಅರಶಿಣಗಿ,ನಾಗಮ್ಮ ಪಾಟೀಲ ಸೇರಿದಂತೆ ಅನೇಕರು ಇದ್ದರು. ಹೇಮಾ ಪಾಟೀಲ ಯಕ್ಷಂತಿ ಸ್ವಾಗತಿಸಿದರು. ಅಂಬಿಕಾ ಪಾಟೀಲ ನಿರೂಪಿಸಿದರೆ ಅರುಣಾ ಸಿದ್ಧರಾಜರೆಡ್ಡಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!