ತಲೆಯ ಮೇಲೆ ಎರಗಿ ಬಿದ್ದ ನಾಯಿ | ಗಂಭೀರ ಗಾಯ | ಜನರಲ್ಲಿ ಆತಂಕ |ದಾಳಿ ತಪ್ಪಿಸಲು ಪ್ರಯತ್ನಿಸಿದರು ಮಗುವನ್ನು ಬಿಡಲಿಲ್ಲ
ಗುರುಮಠಕಲ್ : ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಹೃದಯಭಾಗದಲ್ಲಿ ಕ್ರೂರ ಬೀದಿ ನಾಯಿಯೊಂದು ವಿದ್ಯಾರ್ಥಿ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 3 ದಿನಗಳ ಹಿಂದೆ (ಜುಲೈ 23 ರಂದು) ಶಾಲೆಗೆ ತೆರಳಲು ಸಿದ್ಧವಾಗಿದ್ದ ಮೊಹ್ಮದ್ ಗೌಸ್ (11) ಎನ್ನುವ ವಿದ್ಯಾರ್ಥಿಯೇ ದಾಳಿಗೊಳಗಾದವ.

ಎಂದಿನಂತೆ ಸಿಹಿ ನೀರಿನ ಬಾವಿ ಹತ್ತಿರ ಇರುವ ತನ್ನ ಮನೆಯಿಂದ ವಿದ್ಯಾರ್ಥಿ ಶಾಲೆಗೆ ತೆರಳಲು ಮನೆ ಎದುರು ನಿಂತಿರುವ ವೇಳೆ ಏಕಾಏಕಿ ಬಂದ ನಾಯಿ ಅವನ ಮೇಲೆ ಎರಗಿದ್ದು, ತಲೆಯನ್ನೇ ಬಾಯಿಯಲ್ಲಿ ಹಿಡಿದು ತೀವ್ರ ತರದ ಗಂಭೀರ ಗಾಯಗೊಳಿಸಿದೆ.
ಸ್ಥಳದಲ್ಲೇ ಇದ್ದವರು ದಾಳಿಯಿಂದ ಬಾಲಕನನ್ನು ರಕ್ಷಿಸಲು ಪ್ರಯತ್ನ ಪಟ್ಟರು, ನಾಯಿ ಬಾಲಕನನ್ನು ಬಿಡಲಿಲ್ಲ ಎಂದು ಪ್ರತ್ಯಕ್ಷದರ್ಶಿ ಮೊಹ್ಮದ್ ಜಾವೀದ್ ಮಾಹಿತಿ ನೀಡಿದ್ದಾರೆ.
ಸದ್ಯ ವಿದ್ಯಾರ್ಥಿಯನ್ನು ಪಾಲಕರು ಚಿಕಿತ್ಸೆಗಾಗಿ ಯಾದಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಜನರಲ್ಲಿ ಆತಂಕ: ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬೀದಿ ನಾಯಿ ದಾಳಿಗೆ ಬಾಲಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿರುವುದು ಸ್ಥಳೀಯ ಮಕ್ಕಳ ಪಾಲಕರಲ್ಲಿ ತೀವ್ರ ಆತಂಕ ಹುಟ್ಟಿಸಿದೆ. ಬೀದಿ ನಾಯಿಗಳ ಹಿಡಿದು ಹೊರಗಟ್ಟುವ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾರ್ಯಾಚರಣೆ ನಡೆಸಬೇಕು. ವಿದ್ಯಾರ್ಥಿ ಮೇಲೆ ನಾಯಿ ದಾಳಿ ಅತ್ಯಂತ ಆಘಾತಕಾರಿ ಘಟನೆಯಾಗಿದೆ. ಮನೆಯಿಂದ ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುವ ಆತಂಕ ಪಾಲಕರಿಗೆ ಎದುರಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮವಹಿಸಬೇಕು. – ಗುಲಾಮ ರಬ್ಬಾನಿ, ಬಿಜೆಪಿ ಅಲ್ಪಸಂಖ್ಯಾತ ಮುಖಂಡ.