ಗುರುಮಠಕಲ್ ತಾಲೂಕಿನ ಕಂದಕೂರ ನಲ್ಲಿ ಚೇಳು ಜಾತ್ರೆ | ನಾಗರ ಪಂಚಮಿಯಂದು ವಿಶೇಷ ಪೂಜೆ | ರಾಜ್ಯ ಅಲ್ಲದೇ ಹೊರ ರಾಜ್ಯದ ಜನರು ಭಾಗಿ | ಹೆಚ್ಚಿನ ಪೊಲೀಸ್ ಬಂದೋಬಸ್ತ್

ಯಾದಗಿರಿ: ಬೆಟ್ಟದ ತುಂಬೆಲ್ಲಾ ಇರುವೆಗಳಂತೆ ಕಾಣುವ ಜನ…! ಸುಮಾರು 2 – 3 ಕಿ.ಮೀ. ದೂರದವರೆಗೆ ಜನ ದಟ್ಟಣೆ. ಚೇಳುಗಳನ್ನು ಹಿಡಿಯುವ ಕೌತುಕ ಹೀಗೆ ದೃಶ್ಯಾವಳಿ ಕಂಡಿದ್ದು ಕಂದಕೂರನಲ್ಲಿ.

ಎಲ್ಲೆಡೆ ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ನಾಗದೇವರಿಗೆ ಹಾಲೆರೆದು ನಾರಿಯರು ಶ್ರದ್ಧಾ ಭಕ್ತಿಯಿಂದ ಸಂಭ್ರಮಿಸಿದರೆ, ಇಲ್ಲಿ ವಿಶೇಷವಾಗಿ ಚೇಳು ದೇವರಿಗೆ ಪೂಜೆ ಸಲ್ಲಿಸಿ, ಕಲ್ಲು ಬಂಡೆಗಳಡಿ ಇದ್ದ ಚೇಳುಗಳನ್ನು ಹೊರತೆಗೆದು ಮೈ, ಕೈ ಮೇಲೆ ಎರಚಿಕೊಂಡು ಸಂಭ್ರಮ ಪಟ್ಟರು.ರಾಜ್ಯ ಅಲ್ಲದೇ ನೆರೆಯ ತೆಲಂಗಾಣ, ಆಂಧ್ರಪ್ರದೇಶದ ಸೇರಿದಂತೆ ಸುತ್ತಲಿನ ಯಾದಗಿರಿ, ಕಲಬುರಗಿ, ಸೇಡಂ, ಮೆಹಬೂಬ್ ನಗರಗಳಿಂದಲೂ ಜನರು ಆಗಮಿಸಿ ಚೇಳು ಹಿಡಿದು ಸಂಭ್ರಮಿಸಿದರು.

ಹೆದ್ದಾರಿಯಿಂದಲೇ ವಾಹನಗಳ ಪ್ರವೇಶ ಬಂದ್ ಮಾಡಿದ್ದರಿಂದ ಜನರಿಗೆ ಹೆಚ್ಚೇನು ತೊಂದರೆಯಾಗದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಇದರಿಂದ ಜನರು ಸುಗಮವಾಗಿ ನಡೆಯುವಂತೆ ಅನುಕೂಲವಾಯಿತು.

ಹಗಲಿರುಳು ಜನ ಸೇವೆಯಲ್ಲಿಯೇ ಇರುವ ಪೊಲೀಸರು ಹಬ್ಬ ಹರಿದಿನ ಕುಟುಂಬ ದೊಂದಿಗೆ ಆಚರಿಸುವುದು ತೀರಾ ವಿರಳ, ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಸಹ ಕರ್ತವ್ಯದ ಜೊತೆಗೆ ಚೇಳು ಹಿಡಿದು ಸಂಭ್ರಮಿಸಿದ್ದು ಕಂಡು ಬಂತು.

Spread the love

Leave a Reply

Your email address will not be published. Required fields are marked *

error: Content is protected !!