ಪಲ್ಲಿಗಳು ಹಳ್ಳಿಗಳಾಗಿಸಿ |ಮೊರಾರ್ಜಿ, ಏಕಲವ್ಯ ಶಾಲೆ ಸಮಸ್ಯೆ ಪರಿಹರಿಸಿ | ಕರವೇ ನಡೆ ಹಳ್ಳಿ ಕಡೆ ವಿನೂತನ ಕಾರ್ಯಕ್ರಮ
ಯಾದಗಿರಿ : ಕರವೇ ನಡೆ ಹಳ್ಳಿ ಕಡೆ ವಿಶೇಷ ಕಾರ್ಯಕ್ರಮ ನಡೆಸಲು, ಆ ಮೂಲಕ ಗ್ರಾಮೀಣ ಭಾಗದ ಸಮಸ್ಯೆಗಳು ವಿಶೇಷವಾಗಿ ಶಿಕ್ಷಣ, ಮೂಲಸೌಕರ್ಯ ಸಮಸ್ಯೆ ಪರಿಹರಿಸಲು ತಾಲ್ಲೂಕು ಹಾಗೂ ಗ್ರಾಮೀಣ ಕರವೇ ಕಾರ್ಯಕರ್ತರು ಶ್ರಮಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ ಸಲಹೆ ನೀಡಿದರು.
ಕಸಾಪ ಭವನದಲ್ಲಿ ಜರುಗಿದ ಕರವೇ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳು ಬಹಳಷ್ಟಿವೆ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳು ಇನ್ನು ಹೆಚ್ಚಾಗಿದ್ದು, ಇವುಗಳ ಪರಿಹಾರಕ್ಕೆ ಕರವೇ ಕಾರ್ಯಕರ್ತರು ಹೋರಾಟ ರೂಪಿಸಬೇಕು ಎಂದು ತಿಳಿಸಿದರು.
ವಿಶೇಷವಾಗಿ ಗುರುಮಠಕಲ್ ತಾಲ್ಲೂಕಿನಾದ್ಯಂತ ಅನೇಕ ಸಮಸ್ಯೆಗಳಿವೆ ಅನೇಕ ಹಳ್ಳಿಗಳು ಇನ್ನು ಪಲ್ಲಿ ಎಂದು ತೆಲುಗಿನಲ್ಲಿಯೇ ಇದ್ದು ಇವುಗಳ ಬದಲಿಸಲು ಜಿಲ್ಲಾಡಳಿತ, ಸಚಿವರು, ಶಾಸಕರು ಶ್ರಮಿಸಬೇಕು.
ಈಗಾಗಲೇ ಕೊಲಾರದ ಬಾಗೇಪಲ್ಲಿಯನ್ನು ಸರ್ಕಾರ ಭಾಗ್ಯನಗರ ಎಂದು ಬದಲಿಸಿದೆ ಇದೇಮಾದರಿಯಲ್ಲಿ ಗುರುಮಠಕಲ್ ತಾಲ್ಲೂಕಿನಲ್ಲಿ ಹತ್ತಾರು ಹಳ್ಳಿಗಳು ಪಲ್ಲಿಗಳಾಗಿಯೇ ಉಳಿದಿವೆ. ಇವನ್ನು ಬದಲಿಸಲು ಹೋರಾಟ ಮಾಡಬೇಕೆಂದು ತಿಳಿಸಿದರು.
ಮೋಟ್ನಳ್ಳಿ ಮೊರಾರ್ಜಿ ವಸತಿ ಶಾಲೆ ಶಿಥಿಲಗೊಂಡಿದ್ದು, ಅದನ್ನು ಬಂದಳ್ಳಿ ಗೆ ಸ್ಥಳಾಂತರಿಸಿದ್ದು, 5 ವರ್ಷಗಳಾದರೂ ಕಟ್ಟಡ ದುರಸ್ತಿ ಮಾಡಿಸಲು ಆಗುವುದಿಲ್ಲ ಎಂದರೆ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಇದ್ದು ಏನು ಪ್ರಯೋಜನ, ಆ ಶಾಲೆಯ ಮಕ್ಕಳ ಸಮಸ್ಯೆ ಕಾಣುವುದಿಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸೌಲಭ್ಯ ಇರುವ ಶಾಲೆಗಳಿಗೆ ಭೇಟಿ ನೀಡುವ ಶಾಸಕ, ಸಚಿವ ಹಾಗೂ ಇನ್ನಿತರ ಜನಪ್ರತಿನಿಧಿಗಳಿಗೆ ಮೋಟ್ನಳ್ಳಿ ಶಾಲೆ ಸಮಸ್ಯೆ ಕಾಣುತ್ತಿಲ್ಲವೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಂದಳ್ಳಿ ಏಕಲವ್ಯ ವಸತಿ ಶಾಲೆಗೂ ಮೂಲಭೂತ ಸೌಕರ್ಯಗಳಿಲ್ಲ, ಆರಂಭವಾದಾಗಿನಿಂದ ಸಮಸ್ಯೆಯ ಗೂಡಾಗಿದೆ ತಕ್ಷಣ ಜಿಲ್ಲಾಧಿಕಾರಿಗಳು ಈ ಎರಡು ಶಾಲೆಗಳ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಇನ್ನು ಕರವೇ ಪದಾಧಿಕಾರಿಗಳು ಸಂಘಟನೆ ಹಾಗೂ ಹೋರಾಟದ ವಿಷಯದಲ್ಲಿ ಪ್ರಾಮಾಣಿಕವಾಗಿರಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಅದ್ಯಕ್ಷ ಮಲ್ಲು ಮಾಳಿಕೇರಿ, ಸಂತೋಷ ನಿರ್ಮಲಕರ್, ಚೌಡಯ್ಯ ಬಾವೂರ, ಹಣಮಂತ ಖಾನಳ್ಳಿ, ಶರಣಪ್ಪ ದಳಪತಿ, ಪಪ್ಪುಗೌಡ ಚಿನ್ನಾಕಾರ, ಪ್ರಕಾಶ ಪಾಟೀಲ್ ಜೈಗ್ರಾಮ್, ಸಾಹೇಬಗೌಡ ನಾಯಕ, ಅರ್ಜುನ ಪವಾರ್, ಯಮುನಯ್ಯ ಗುತ್ತೇದಾರ, ವಿಶ್ವರಾಜ ಪಾಟೀಲ್, ವೆಂಕಟೇಶ ಬೈರಿಮಡ್ಡಿ, ಶರಣಬಸಪ್ಪ ಯಲ್ಹೇರಿ, ಅಬ್ದುಲ್ ಚಿಗಾನೂರ, ಬಸವರಾಜ ಚೆನ್ನೂರ, ಭೀಮು ಮಲ್ಲಿಭಾವಿ, ಸಿದ್ದಪ್ಪ ಕೂಯಿಲೂರ, ಸಿದ್ದಪ್ಪ ಕ್ಯಾಸಪನಳ್ಳಿ, ಭೀಮರಾಯ ರಾಮಸಮುದ್ರ, ಹಣಮಂತ್ರಾಯ ತೇಕರಾಳ, ಸುರೇಶ ಬೆಳಗುಂದಿ, ಜನಾರ್ಧನ್ ಚಾಮನಳ್ಳಿ, ಹುಲುಗಪ್ಪ ಚಟ್ನಳ್ಳಿ, ಸಲಿಮ್ ಯರಗೋಳ, ಯಲ್ಲಾಲಿಂಗ ಚಾಮನಳ್ಳಿ, ಸೈದಪ್ಪ ಗೌಡಗೇರಾ, ನಾಗಪ್ಪ ಗೋಪಾಳಪುರ,ಮಲ್ಲಿಕಾರ್ಜುನ ಕನ್ನಡಿ, ವೆಂಕಟರಾಮು ಸೈದಾಪೂರ, ಅಬ್ದುಲ್ ರಿಯಾಜ್ ಸೇರಿದಂತೆ ಅನೇಕರು ಪಾಲ್ಗೊಂಡರು.
