ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಪತ್ರಿಕಾಗೋಷ್ಠಿ | ಉತ್ತರ ಕರ್ನಾಟಕದಲ್ಲಿ ನಾನು, ಅವನು ಎನ್ನುವುದು ಸಾಮಾನ್ಯ | ಜೆಡಿಎಸ್ ನಾಯಕರ ಸಮರ್ಥನೆ

ಗುರುಮಠಕಲ್: ಸೆ.7 ರಂದು ನಡೆದ ಪ್ರಜಾಸೌದ ಅಡಿಗಲ್ಲು ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆ, ಅಗೌರವ ಎಂದು ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದು, ಕಡ್ಡಿಯನ್ನು ಗುಡ್ಡ ಮಾಡಿದಂತಿದೆ ಎಂದು ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ನಾಗರತ್ನ ಮೂರ್ತಿ ಹೇಳಿದ್ದಾರೆ.

ಶಾಸಕ ಶರಣಗೌಡ ಕಂದಕೂರ ಅವರ ಜನಸಂಪರ್ಕ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭಾಗದಲ್ಲಿ ನಾನಾ, ಅವನಾ ಎನ್ನುವುದು ಸಾಮಾನ್ಯ ಎಂದು ಸಮರ್ಥಿಸಿಕೊಂಡ ಅವರು, ಸ್ಥಳೀಯ  ಕಾಂಗ್ರೆಸ್ ನಾಯಕರಿಗೆ ಪ್ರತಿಭಟನೆ ಮಾಡಲು ಯಾವುದೇ ವಿಷಯ ಇಲ್ಲ. ಹಾಗಾಗಿ ಇದನ್ನೇ ದೊಡ್ಡದು ಮಾಡಿ ಅವರ ನಾಯಕರಿಂದ ಭೇಷ್ ಹೇಳಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.ಪಕ್ಷದ ಪ್ರತಿಭಟನೆಗೆ ಕೋಲಿ ಸಮಾಜದವರು ಪಾಲ್ಗೊಳ್ಳಬೇಕು ಎಂದು ಹೇಳಿದ್ದಕ್ಕೆ ವಿಡಿಯೋ ಮೂಲಕ ಜಾಗೃತಿ ಮೂಡಿಸಲಾಯಿತು. ಕೋಲಿ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕಾರ್ಯವಾಗಿತ್ತು ಎಂದರು.

ಬಸವಕಲ್ಯಾಣ ದ ಮಹಿಳೆ ಚುನಾವಣೆಗೆ ನಿಂತಾಗ ಕುಲ ನೆನಪಾಗಲಿಲ್ಲ, ಮಾರ್ಥಂಡಪ್ಪಗೆ ತೊಂದರೆಯಾದಾಗ ಕುಲ ಬರಲಿಲ್ಲ, ಈಗ ಒಣ ಪ್ರತಿಷ್ಠೆಗಾಗಿ ಕುಲವನ್ನು ರಸ್ತೆಗೆ ತರುವ ಹುನ್ನಾರ ಮಾಡಲಾಗಿತ್ತು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್ ಕಟಕಟಿ ಮಾತನಾಡಿ, ಬಸರೆಡ್ಡಿ ಅನಪುರ ಮೊದಲು ಏನಿದ್ದೀರಿ, ಈಗ ಏನಾಗಿದ್ದೀರಿ ಎಂದು ತಿಳಿದು ಮಾತನಾಡಿ ಎಂದು ಎಚ್ಚರಿಸಿದರು. ನಕಲಿ ಬೋರವೆಲ್ ಕೊರೆದ ದಾಖಲೆ ಸೃಷ್ಟಿ ಮಾಡಿ ಬಿಲ್ ಎತ್ತಿದ್ದು ಗೊತ್ತು ಎಂದರು.

ಗೊಂದಲ ಆದಾಗ ಹಿರಿಯರಿಗೆ ಗೌರವ ಕೊಡಬೇಕು ಎಂದು ಶಾಸಕರೇ ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದಾರೆ. ಆದರೇ ಗೌರವ ಕೊಟ್ಟಿದ್ದನ್ನೇ ಅಗೌರವ ಎಂದು ಹೇಳುವುದು ಸರಿಯಲ್ಲ. ನಾವು ಸುಸಂಸ್ಕೃತರು, ನಿಮ್ಮ ಸಂಸ್ಕೃತಿಯನ್ನು ಜನರು ಗಮನಿಸುತ್ತಿದ್ದಾರೆ ಎಂದರು.ಹಿರಿಯರ ನಾಯಕರು ನಿಮ್ಮ ಮುಖ ನೋಡಲು ಸಹ ಇಷ್ಟಪಡಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ನೇಪಾಳ ತರ ಪರಿಸ್ಥಿತಿ ಬಂದರೆ ನಿಮ್ಮ ಸರ್ಕಾರಕ್ಕೆ ಬರುತ್ತದೆ, ಹಿಂದೆ ಮುಂದೆ ಯೋಚಿಸಿ ಮಾತನಾಡಲು ಸಲಹೆ ನೀಡಿದರು.

ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜನಪ್ರೀಯತೆ, ವಿಧಾನಸಭೆ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿ ಸಮಸ್ಯೆ ನಿವಾರಣೆಗೆ ಹೋರಾಟ ಮಾಡುತ್ತಿದ್ದಾರೆ. ಜನರಿಗೆ ತೊಂದರೆ ಆಗಬಾರದು ಎಂದು ಸಚಿವರು, ಸರ್ಕಾರದಿಂದ ಸೋಲಾರ್ ಹೈಮಾಸ್ಟ್ ತಂದಿದ್ದಾರೆ ಆದರೇ ಇದನ್ನು ನೋಡಲು ಆಗುತ್ತಿಲ್ಲ. ಅಭಿವೃದ್ಧಿ ನೋಡಿ ಕಣ್ಣು ಉರಿಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೈ  ನಾಯಕರಂತೆ ಸಣ್ಣತನ ಬುದ್ಧಿ ನಮಗಿಲ್ಲ. ಆಧಾರ್ ಕಾರ್ಡ್ ನಲ್ಲಿ ಅಡ್ರೆಸ್ ಬದಲಿಸಿದರೆ, ಹುಟ್ಟೂರು ಬದಲಾಗಲ್ಲ. ನಾಯಕರ ಬಳಿ ಹೌದೆನ್ನಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದರು.

ಈ ವೇಳೆ ಬಸ್ಸಣ್ಣ ದೇವರಹಳ್ಳಿ, ತಾಯಪ್ಪ ಬದ್ದೇಪಲ್ಲಿ, ಭೀಮಶಪ್ಪ ಗೂಡ್ಸೆ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್, ಪ್ರಕಾಶ ನೀರೆಟಿ, ಈಶ್ವರ ರಾಠೋಡ, ನರಸಪ್ಪ ಕವಡೆ, ಕೃಷ್ಣ ರೆಡ್ಡಿ, ಮಲ್ಲನಗೌಡ ಕೌಳೂರ, ನರ್ಮದಾ, ಲಾಲಪ್ಪ ತಲಾರಿ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!